ಮುಂಬೈ, ಮೇ 15 (DaijiworldNews/DB): ಎನ್ಸಿಪಿ ಮುಖ್ಯಸ್ಥ ಹಾಗೂ ಹಿರಿಯ ರಾಜಕಾರಣಿ ಶರದ್ ಪವಾರ್ ವಿರುದ್ಧ ಮಾತನಾಡಿದ್ದಕ್ಕೆ ಬಿಜೆಪಿ ಮುಖಂಡರೊಬ್ಬರಿಗೆ ಎನ್ಸಿಪಿ ಕಾರ್ಯಕರ್ತರು ಕಪಾಳ ಮೋಕ್ಷ ಮಾಡಿದ ಘಟನೆ ನಡೆದಿದೆ.
ಮಹಾರಾಷ್ಟ್ರದ ಬಿಜೆಪಿ ವಕ್ತಾರ ವಿನಾಯಕರ್ ಅಂಬೇಕರ್ ಅವರಿಗೆ ಎನ್ಸಿಪಿ ಕಾರ್ಯಕರ್ತರು ಕಪಾಳ ಮೋಕ್ಷ ಮಾಡಿದ್ದಾರೆ. ಈ ವೀಡಿಯೋವನ್ನು ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್ ತಮ್ಮ ಟ್ವಿಟರ್ನಲ್ಲಿ ಪೋಸ್ಟ್ ಮಾಡಿ ಕಪಾಳಮೋಕ್ಷ ಮಾಡಿದ ಗೂಂಡಾಗಳನ್ನು ತತ್ಕ್ಷಣ ಪೊಲೀಸರು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಎನ್ಸಿಪಿ ಗೂಂಡಾಗಳು ನಮ್ಮ ಪಕ್ಷದ ವಕ್ತಾರರ ಮೇಲೆ ದಾಳಿ ಮಾಡಿದ್ದಾರೆ. ಇದು ಖಂಡನೀಯ ಬೆಳವಣಿಗೆ. ಇಂತಹ ಅದಕ್ಷತೆ ತೋರುವವರಿಗೆ ತಕ್ಕ ಶಿಕ್ಷೆಯಾಗಬೇಕು. ಅವರನ್ನು ಶೀಘ್ರ ಪೊಲೀಸರು ಬಂಧಿಸಬೇಕು ಎಂದವರು ಒತ್ತಾಯಿಸಿದ್ದಾರೆ.
ಕುರ್ಚಿಯಲ್ಲಿ ಕುಳಿತಿರುವ ವಿನಾಯಕರ್ ಅಂಬೇಕರ್ ಅವರೊಂದಿಗೆ ಎನ್ಸಿಪಿಯ ಕೆಲವು ಕಾರ್ಯಕರ್ತರು ಮಾತಿನ ಚಕಮಕಿ ನಡೆಸುತ್ತಿರುವುದು ವೀಡಿಯೋದಲ್ಲಿದೆ. ಬಳಿಕ ವ್ಯಕ್ತಿಯೊಬ್ಬ ಅಂಬೇಕರ್ ಅವರಿಗೆ ಕಪಾಳಮೋಕ್ಷ ಮಾಡಿರುವುದು ವೀಡಿಯೋದಲ್ಲಿ ದಾಖಲಾಗಿದೆ.