ಉದಯಪುರ, ಮೇ 15 (DaijiworldNews/DB): ಆರೆಸ್ಸೆಸ್ ಮತ್ತು ಬಿಜೆಪಿ ವಿರುದ್ದದ ಹೋರಾಟಕ್ಕೆ ನಾನು ಕಾರ್ಯಕರ್ತರ ಜೊತೆಗೆ ಸದಾ ಇರುತ್ತೇನೆ. ಏಕೆಂದರೆ ಈ ಹೋರಾಟವು ಭಾರತದ ಭವಿಷ್ಯಕ್ಕಾಗಿ ನಡೆಯುವ ಹೋರಾಟವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ರಾಜಸ್ಥಾನದ ಉದಯಪುರದಲ್ಲಿ ನಡೆದ ಕಾಂಗ್ರೆಸ್ನ ಚಿಂತನ್ ಶಿವರ್ನಲ್ಲಿ ಮಾತನಾಡಿದ ಅವರು, ನಮ್ಮದು ರಾಷ್ಟ್ರೀಯ ಪಕ್ಷದ ವಿರುದ್ಧದ ಹೋರಾಟವಲ್ಲ. ಸಂಸ್ಥೆಗಳ ವಿರುದ್ದ ಹೋರಾಟ. ಕ್ರೋನಿ ಕ್ಯಾಪಿಟಲಿಸ್ಟ್ಗಳ ವಿರುದ್ದದ ಹೋರಾಟ ನಮ್ಮದು ಎಂದರು.
ಕಾರ್ಯಕರ್ತರು ನೀರ್ಭೀತಿಯಿಂದ ಈ ಹೋರಾಟದಲ್ಲಿ ತೊಡಗಿಸಿಕೊಳ್ಳಿ. ದೇಶದ ಜನತೆ ಸತ್ಯದ ಪರವಾಗಿದ್ದಾರೆ. ಸತ್ಯವನ್ನು ಜನರಿಗೆ ತಿಳಿಸಲು ಆತಂಕ ಅನಗತ್ಯ. ಬಿಜೆಪಿ, ಆರೆಸ್ಸೆಸ್ ಸಿದ್ಧಾಂತದಿಂದ ದೇಶದ ಭವಿಷ್ಯಕ್ಕೆ ಸಮಸ್ಯೆ ಇದ್ದು, ಭಾರತದ ಭವಿಷ್ಯ ಸದೃಢವಾಗಲು ನಿರಂತರ ಹೋರಾಟ ಅಗತ್ಯ ಎಂದು ಅವರು ಪ್ರತಿಪಾದಿಸಿದರು.
ಪ್ರಾದೇಶಿಕ ಪಕ್ಷಗಳಿಗೆ ಸೈದ್ದಾಂತಿಕ ಬೆಂಬಲ ಇಲ್ಲ. ಹಾಗಾಗಿ ಅವರನ್ನು ಗುರಿಯಾಗಿಸದ ಬಿಜೆಪಿ ಕಾಂಗ್ರೆಸ್ ಮೇಲೆ ದಾಳಿ ಮಾಡುತ್ತಿದೆ ಎಂದವರು ಇದೇ ವೇಳೆ ತಿಳಿಸಿದರು.