ಆನೇಕಲ್, ಮೇ 15 (DaijiworldNews/DB): ರಾಜಕೀಯ ತೆವಲಿಗಾಗಿ ದಲಿತ ಸಿಎಂ ಚರ್ಚೆ ಹುಟ್ಟಿಕೊಳ್ಳುತ್ತದೆ. ವಾಗ್ದಾನಕ್ಕೆ ಮರುಳಾಗಿ ದಲಿತ ಸಿಎಂ ಆಗುತ್ತೇನೆ ಎಂದು ಯಾರಾದರೂ ಕನಸು ಕಂಡರೆ ಅವನೊಬ್ಬ ಹುಚ್ಚ ಎಂದು ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ ಹೇಳಿದ್ದಾರೆ.
ಆನೇಕಲ್ನ ಸಾಯಿರಾಮ್ ಕಾಲೇಜಿನಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಐದು ವರ್ಷವೂ ಮುಂದುವರಿಯಲುಬಿಡಲಿಲ್ಲ. ಒಂಬತ್ತು ಬಾರಿ ಶಾಸಕರಾದ ಮಲ್ಲಿಕಾರ್ಜುನ ಖರ್ಗೆ ಇನ್ನೂ ಸಿಎಂ ಆಗಿಲ್ಲ. ಪರಮೇಶ್ವರ್ ಅವರು ಮುಖ್ಯಮಂತ್ರಿ ಆಗಲಿದ್ದಾರೆಂದೇ ಅವರನ್ನು ಸೋಲಿನೆಡೆಗೆ ದೂಡಲಾಯಿತು. ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಎಂಬುದು ಕೇವಲ ಬಾಯಿ ಮಾತಿಗಷ್ಟೇ ಸೀಮಿತವಾಗಿದೆಯೇ ಹೊರತು ಕೈಗೂಡುವುದಿಲ್ಲ. ಅಂತಹ ಕನಸು ಕಾಣಬೇಕಷ್ಟೇ ಹೊರತು ನನಸಾಗಲು ಯಾರೂ ಬಿಡುವುದಿಲ್ಲ ಎಂದರು.
ಸಿಎಂ ಬೊಮ್ಮಾಯಿ ಅವರು ಸರಳತೆಗೆ ಹೆಸರಾದ ಮುಖ್ಯಮಂತ್ರಿ. ಅವರ ಬದಲಾವಣೆ ಇಲ್ಲ. ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.