ಮಂಡ್ಯ, ಮೇ 15 (DaijiworldNews/HR): ಯುವ ಕಾಂಗ್ರೆಸ್ ಕಾರ್ಯಕರ್ತರು ಮೈ ಶುಗರ್ ಕಾರ್ಖಾನೆ ಸ್ವಚ್ಛಗೊಳಿಸಲು ಮುಂದಾಗಿದ್ದು, ಅವರನ್ನು ಪೊಲೀಸರು ತಡೆದು ವಶಕ್ಕೆ ಪಡೆದುಕೊಂಡಿರುವ ಘಟನೆ ನಡೆದಿದೆ.
ಕಾರ್ಖಾನೆ ಸ್ವಚ್ಛತೆಗೆ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ನೇತೃತ್ವದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಆಗಮಿಸಿದ್ದು, ಈ ವೇಳೆ ಕಾರ್ಖಾನೆ ಪ್ರವೇಶಕ್ಕೆ ಗೇಟ್ ತೆರೆಯಲು ಮುಂದಾಗುತ್ತಿದ್ದಂತೆ ಅವಕಾಶ ನೀಡದ ಪೊಲೀಸರು ಬ್ಯಾರಿಕೇಡ್ ಗಳನ್ನು ಹಾಕಿ ತಡೆದಿದ್ದಾರೆ.
ಇನ್ನು ಫ್ಯಾಕ್ಟರಿ ಎದುರು ಪೊಲೀಸರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದ್ದು, ಕಾರ್ಖಾನೆ ಎದುರೇ ಕಾಂಗ್ರೆಸ್ ಕಾರ್ಯಕರ್ತರು ಧರಣಿ ಕುಳಿತುಕೊಳ್ಳಲು ಮುಂದಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಪೊಲೀಸರು ನಲಪಾಡ್ ಸೇರಿದಂತೆ ಹಲವು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.