ಜೈಪುರ, ಮೇ 15 (DaijiworldNews/DB): ಯುವತಿ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ರಾಜಸ್ಥಾನದ ಸಚಿವ ಮಹೇಶ್ ಜೋಶಿ ಅವರ ಪುತ್ರ ರೋಹಿತ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು, ಭಾನುವಾರ ಜೈಪುರದಲ್ಲಿ ಹುಡುಕಾಟ ಆರಂಭಿಸಿದ್ದಾರೆ.
ಕಳೆದ ವರ್ಷ ಜನವರಿ 8 ರಿಂದ ಈ ವರ್ಷದ ಏಪ್ರಿಲ್ 17 ರವರೆಗೆ 23 ವರ್ಷದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ರೋಹಿತ್ ಅನೇಕ ಬಾರಿ ಅತ್ಯಾಚಾರ ನಡೆಸಿದ್ದ. ಫೇಸ್ಬುಕ್ನಲ್ಲಿ ಪರಿಚಯವಾದ ಈತ ತನ್ನನ್ನು ಅಪಹರಣ ಮಾಡಿ ಬ್ಲಾಕ್ಮೇಲ್ ಮಾಡಿದ್ದ. ಪಾನೀಯದಲ್ಲಿ ಮತ್ತು ಬರುವ ಔಷಧ ನೀಡಿ ಅತ್ಯಾಚಾರ ಎಸಗಿದ್ದ. ಮರುದಿನ ಬೆತ್ತಲೆಯಾಗಿ ಚಿತ್ರೀಕರಣ ಮಾಡಿದ್ದ ಎಂದು ಆಕೆ ತನ್ನ ದೂರಿನಲ್ಲಿ ತಿಳಿಸಿದ್ದಳು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಚಿವರಿಗೆ ಸೇರಿದ ಎರಡು ಮನೆಗಳಲ್ಲಿ ಶೋಧ ಕಾರ್ಯ ನಡೆಸಿದ್ದರು. ಆದರೆ ಆರೋಪಿ ತಲೆ ಮರೆಸಿಕೊಂಡಿದ್ದ. ಹೀಗಾಗಿ ಆತ ಜೈಪುರದಲ್ಲಿರುವ ಮಾಹಿತಿ ಮೇರೆಗೆ ಪೊಲೀಸರ ತಂಡ ಜೈಪುರಕ್ಕೆ ತೆರಳಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಅಲ್ಲದೆ, ಮೇ 18 ರೊಳಗೆ ವಿಚಾರಣೆಗೆ ಹಾಜರಾಗುವಂತೆ ರೋಹಿತ್ ಜೋಷಿಗೆ ದೆಹಲಿ ಪೊಲೀಸರು ಸಮನ್ಸ್ ಹೊರಡಿಸಿದ್ದಾರೆ.
ಈ ಮಧ್ಯೆ ಆರೋಪಿಯನ್ನು ರಕ್ಷಿಸಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ಆರೋಪ ಮಾಡಿದೆ.