ಬೆಂಗಳೂರು, ಮೇ 15 (DaijiworldNews/DB): ಕೋವಿಡ್-19 ಸಾಂಕ್ರಾಮಿಕ ರೋಗ ಹರಡದಂತೆ ನಿಭಾಯಿಸುವಲ್ಲಿ ವೈಫಲ್ಯ ಅನುಭವಿಸಿದ ಕಾರಣಕ್ಕೆ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅಧಿಕಾರ ಕಳೆದುಕೊಳ್ಳಲಿದ್ದಾರೆಂಬ ಊಹಾಪೋಹಗಳ ಸಂಬಂಧ ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯನ್ ಸ್ವಾಮಿ ಸ್ವಾರಸ್ಯಕರವಾದ ಟ್ವೀಟ್ ಮಾಡಿದ್ದಾರೆ.
ಒಂದು ವೇಳೆ ಚೀನಾ ಅಧ್ಯಕ್ಷರು ಅಧಿಕಾರ ಕಳೆದುಕೊಳ್ಳುವುದು ನಿಜವೇ ಆದಲ್ಲಿ, ಒಬ್ಬರು ಕೆಳಗಿಳಿಯಲಿದ್ದಾರೆ ಮತ್ತು ಇನ್ನಿಬ್ಬರು ಅವರ ಹಾದಿಯನ್ನೇ ಹಿಡಿಯಲಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ. ಆದರೆ ಸುಬ್ರಹ್ಮಣ್ಯನ್ ಸ್ವಾಮಿ ಅವರು ಪರೋಕ್ಷವಾಗಿ ಯಾರ ಮೇಲೆ ಟ್ವೀಟಾಸ್ತ್ರ ಹೂಡಿರುವುದು ಎಂಬುದು ತಿಳಿದು ಬಂದಿಲ್ಲವಾದರೂ, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನೇ ಗುರಿಯಾಗಿಸಿಕೊಂಡು ಸ್ವಾಮಿ ಈ ಟ್ವೀಟ್ ಮಾಡಿದ್ದಾರೆ ಎಂಬ ಅಭಿಪ್ರಾಯವನ್ನು ನೆಟ್ಟಿಗರು ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರನ್ನು ಇತ್ತೀಚೆಗೆ ಹಲವು ಬಾರಿ ಸ್ವಾಮಿ ಟೀಕಿಸಿದ್ದಾರೆ. ಇತ್ತೀಚೆಗೆ ಹಣದುಬ್ಬರದಿಂದ ಬಡವರಿಗಿಂತ ಶ್ರೀಮಂತರೇ ಹೆಚ್ಚು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಕೂಡಾ ಸ್ವಾಮಿ ಲೇವಡಿ ಮಾಡಿದ್ದರು.