ಮಲಪ್ಪುರಂ, ಮೇ 15 (DaijiworldNews/DB): ಮೂರು ದಶಕಗಳ ಸೇವೆಯಲ್ಲಿ 75 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕೇರಳದ ಮಲಪ್ಪುರಂ ಜಿಲ್ಲೆಯ ಶಾಲಾ ಶಿಕ್ಷಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಶಶಿಕುಮಾರ್ (58 ) ಬಂಧಿತ ಶಿಕ್ಷಕ. ಈತ 30 ವರ್ಷಗಳ ಕಾಲ ಶಿಕ್ಷಕನಾಗಿದ್ದು, ಕಳೆದ ಮಾರ್ಚ್ನಲ್ಲಿ ಮಲಪ್ಪುರಂನ ಅನುದಾನಿತ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಿವೃತ್ತನಾಗಿದ್ದ. ಈತ ತನ್ನ ನಿವೃತ್ತಿ ಕಾರ್ಯಕ್ರಮದ ಫೋಟೋವನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದು, ತತ್ಕ್ಷಣ ಹಳೆ ವಿದ್ಯಾರ್ಥಿಯೊಬ್ಬರು ತಾನು ಶಾಲಾ ವಿದ್ಯಾರ್ಥಿಯಾಗಿದ್ದಾಗ ಈತ ಲೈಂಗಿಕ ಕಿರುಕುಳ ನೀಡಿರುವುದಾಗಿ ಕಮೆಂಟ್ ಮಾಡಿದ್ದಾರೆ. ಆ ಬಳಿಕ ಈತನಿಂದ ಕಿರುಕುಳಕ್ಕೆ ಒಳಗಾದ ಇತರ ವಿದ್ಯಾರ್ಥಿಗಳೂ ಕಮೆಂಟ್ ಮಾಡಿದ್ದಲ್ಲದೆ, ಶಿಕ್ಷಕನ ವಿರುದ್ಧ #metoo ಅಭಿಯಾನ ಪ್ರಾರಂಭಿಸಿದರು.
ಹೆಚ್ಚಿನ ವಿದ್ಯಾರ್ಥಿಗಳು ದೂರು ದಾಖಲಿಸಲು ಹಿಂದೇಟು ಹಾಕಿದ್ದು, ಕೇವಲ ಒಂದು ದೂರು ಮಾತ್ರ ದಾಖಲಾಗಿದೆ. ದೂರಿನ ಆಧಾರದ ಮೇಲೆ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ. ಇದೇ ವೇಳೆ ಶಾಲಾ ಹಳೆ ವಿದ್ಯಾರ್ಥಿ ಸಂಘದ ಕೆಲವು ಸದಸ್ಯರು ಕೂಡಾ ಈತನ ವಿರುದ್ದ ದೂರು ದಾಖಲಿಸಿದ್ದಾರೆ. ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಜಿತ್ ದಾಸ್ ತಿಳಿಸಿದ್ದಾರೆ. ಕೇರಳ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ಅವರೂ ತಪ್ಪಿತಸ್ಥ ಶಿಕ್ಷಕನ ವಿರುದ್ದ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದ್ದಾರೆ. ಶಾಲಾ ಆಡಳಿತ ಕಡೆಯಿಂದ ಲೋಪ ಆಗಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಯಲಿದೆ ಎಂದು ಪೊಲೀಸರು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಆರೋಪಿ ಶಿಕ್ಷಕ ಸಿಪಿಐ(ಎಂ) ಮುಖಂಡನಾಗಿ ಮೂರು ಬಾರಿ ಮಲಪ್ಪುರಂ ಪುರಸಭಾ ಸದಸ್ಯನಾಗಿಯೂ ಕಾರ್ಯನಿರ್ವಹಿಸಿದ್ದ. ಆದರೆ ಕಳೆದ ತಿಂಗಳಷ್ಟೇ ಪಕ್ಷದಿಂದ ಆತನನ್ನು ಉಚ್ಚಾಟನೆ ಮಾಡಲಾಗಿತ್ತು. ಪಕ್ಷದ ಆಂತರಿಕ ಭಿನ್ನಾಭಿಪ್ರಾಯಕ್ಕಾಗಿ ತನ್ನನ್ನು ಗುರಿಯಾಗಿಸಿ ಆರೋಪ ಹೊರಿಸಲಾಗುತ್ತಿದೆ ಎಂದು ಆತ ಆರೋಪಿಸಿದ್ದಾನೆ.