ಹೊಸಪೇಟೆ (ವಿಜಯನಗರ), ಮೇ 15 (DaijiworldNews/DB): ನಾನೊಬ್ಬ ದೊಡ್ಡ ಸೋಂಬೇರಿ. ನಾನು ಯೋಗ ಮಾಡುವುದಿಲ್ಲ. ಆದರೆ ಇತರರ ಯೋಗಾಭ್ಯಾಸ ನೋಡಿದರೆ ನನಗೂ ಸ್ಫೂರ್ತಿ ಸಿಗುತ್ತದೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ವಿಶ್ವಪ್ರಸಿದ್ಧ ಹಂಪಿಯಲ್ಲಿ ಒಂದು ತಿಂಗಳ ಕಾಲ ಹಮ್ಮಿಕೊಂಡಿರುವ ಯೋಗ ಉತ್ಸವ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಯೋಗಾಭ್ಯಾಸಕ್ಕೆ ನಾನೂ ಪ್ರಯತ್ನಿಸುತ್ತೇನೆ ಎಂದರು.
ಆರೋಗ್ಯವೇ ಭಾಗ್ಯ. ದೇಶದ ಯುವಶಕ್ತಿಯ ಆರೋಗ್ಯದ ಮೇಲೆ ರಾಷ್ಟ್ರದ ಭವಿಷ್ಯ ನಿಂತಿದೆ. ಯೋಗಗುರು ಬಾಬಾ ರಾಮದೇವ್ ದೇಶಕ್ಕೆ, ವಚನಾನಂದ ಸ್ವಾಮೀಜಿಯವರು ರಾಜ್ಯಕ್ಕೆ ಯೋಗಗುರುಗಳು. ಯೋಗಾಭ್ಯಾಸ ಕಾರ್ಯಕ್ರಮಕ್ಕೆ ದೊಡ್ಡ ಸಂಖ್ಯೆಯಲ್ಲಿ ಜನ ಸೇರುತ್ತಾರೆಂದರೆ ಆ ಗುರುಗಳು ಮತ್ತು ಯೋಗಕ್ಕಿರುವ ಶಕ್ತಿ ಎಂತಹುದು ಎಂಬುದು ತಿಳಿಯುತ್ತದೆ ಎಂದವರು ಅಭಿಪ್ರಾಯಪಟ್ಟರು.
ಶ್ವಾಸ ಯೋಗ ಸಂಸ್ಥೆ, ಪತಂಜಲಿ ಯೋಗ ಸಂಸ್ಥೆ, ಕೇಂದ್ರ ಸರ್ಕಾರದ ಮೊರಾರ್ಜಿ ದೇಸಾಯಿ ಯೋಗ ವಿಜ್ಞಾನ ಸಂಸ್ಥೆ ಹಾಗೂ ಆಯುಷ್ ಇಲಾಖೆಯ ಸಹಭಾಗಿತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಅವರು ಯೋಗ ಹೇಳಿಕೊಟ್ಟರು.