ಮುಂಬೈ, ಮೇ 15 (DaijiworldNews/DB): ಬಿಜೆಪಿಯು ಶಿವಸೇನಾದ ಎರಡೂವರೆ ದಶಕಗಳನ್ನು ಹಾಳು ಮಾಡಿದೆ. ಮಿತ್ರಪಕ್ಷವನ್ನು ಕಳೆದುಕೊಂಡು ಈಗ ಆ ಪಕ್ಷ ಭಗ್ನಪ್ರೇಮಿಯಂತೆ ವರ್ತಿಸುತ್ತಿದೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಹಾಗೂ ಶಿವಸೇನಾ ನಾಯಕ ಉದ್ಧವ್ ಠಾಕ್ರೆ ವ್ಯಂಗ್ಯವಾಡಿದ್ದಾರೆ.
ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಬ್ಯಾಟರ್ ಏಕಾಗ್ರತೆ ತಪ್ಪಿಸಲು ಎದುರಾಳಿ ತಂಡದವರು ಸ್ಲೆಡ್ಜಿಂಗ್ ಮಾಡುವಂತೆ ಬಿಜೆಪಿಯವರು ಮಾಡುತ್ತಿದ್ದಾರೆ. ಬ್ಯಾಟರ್ನ್ನು ಸೋಲುವಂತೆ ಮಾಡಲು ಸದಾ ತೊಂದರೆ ನೀಡುತ್ತಾರೆ ಎಂದು ಲೇವಡಿ ಮಾಡಿದರು.
ಬಿಜೆಪಿಯವರು ಏಕಮುಖ ಪ್ರೇಮಿಯಂತೆ ವರ್ತಿಸುತ್ತಿದ್ದಾರೆ. ಅವರ ಪ್ರೀತಿ ನಿರಾಕರಿಸಿದರೆ ಅವರು ಆಸಿಡ್ ಎರಚಿ ಪರಾರಿಯಾಗುತ್ತಾರೆ. ಇದು ಅವರಿಗೆ ಕರಗತವಾಗಿರುವುದರಿಂದ ನಾವು ಎಚ್ಚರದಿಂದಿರುವುದು ಅಗತ್ಯವಾಗಿದೆ ಎಂದು ಕುಟುಕಿದರು.
ಮಹಾ ಸರ್ಕಾರದ ವಿರುದ್ದ ಮಾತನಾಡಲು ಬಿಜೆಪಿಯು ಎ,ಬಿ,ಸಿ,ಡಿ ತಂಡಗಳನ್ನು ನಿಯೋಜಿಸಿದೆ. ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಶಿವಸೇನಾದ ಯಾವೊಬ್ಬರೂ ಭಾಗವಹಿಸಿಲ್ಲ ಎಂದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಹೇಳಿಕೆಗೆ ಕಿಡಿಕಾರಿದ ಉದ್ದವ್ ಠಾಕ್ರೆ, ಬಾಬರಿ ಮಸೀದಿ ಧ್ವಂಸದಲ್ಲಿ ಭಾಗವಹಿಸಿದ್ದಾಗಿ ಹೇಳಿರುವ ಅವರ ವಯಸ್ಸು ಆಗ ಎಷ್ಟಾಗಿತ್ತು ಎಂಬುದನ್ನು ಸ್ಪಷ್ಟಪಡಿಸಬೇಕು. ಒಂದು ವೇಳೆ ಅವರು ಮಸೀದಿ ಏರಿದ್ದರೆ ಅದು ಕುಸಿಯುತ್ತಿತ್ತು ಎಂದು ಲೇವಡಿ ಮಾಡಿದರು.