ದಾವಣಗೆರೆ, ಮೇ 14 (DaijiworldNews/DB): ಸರ್ಕಾರಿ ಆಡಳಿತ ಕ್ಷಿಪ್ರವಾಗಿ ನಡೆಯುವ ಮತ್ತು ಜನಸಾಮಾನ್ಯರಿಗೆ ಪರಿಣಾಮಕಾರಿಯಾಗಿ ತಲುಪಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ವಾರದಲ್ಲಿ ಒಂದು ದಿನ ತಾಲೂಕು ಕಚೇರಿಗಳಲ್ಲಿ ಕೆಲಸ ಮಾಡಬೇಕು ಎಂದು ಕಂದಾಯ ಸಚಿವ ಆರ್. ಅಶೋಕ್ ಆದೇಶಿಸಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಈ ಕುರಿತು ವಾರದೊಳಗೆ ಅಧಿಕೃತ ಆದೇಶ ಹೊರಡಿಸಲಾಗುವುದು. ಕಡ್ಡಾಯವಾಗಿ ಎಲ್ಲಾ ಜಿಲ್ಲಾಧಿಕಾರಿಗಳೂ ತಾಲೂಕು ಕಚೇರಿಗಳಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ ಎಂದರು.
ವಿಎ ಹುದ್ದೆಯ ಹೆಸರನ್ನು ವಿಇಓ ಎಂದು ಬದಲಾಯಿಸಲು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು. ಆ ಮೂಲಕ ಗ್ರಾಮ ಲೆಕ್ಕಾಧಿಕಾರಿಗಳು ಗ್ರಾಮ ಕಾರ್ಯ ನಿರ್ವಹಣಾಧಿಕಾರಿಗಳಾಗುತ್ತಾರೆ. ಇಂತಹ ಬೇಡಿಕೆ ಇದ್ದು, ಚರ್ಚಿಸಿ ತೀರ್ಮಾನಿಸಲಾಗುವುದು ಎಂದವರು ತಿಳಿಸಿದರು.