ಚನ್ನೈ, ಮೇ 14 (DaijiworldNews/HR): ಮಹಿಳೆಯೊಬ್ಬರು ತನ್ನ ಮಗಳನ್ನು ಏಕಾಂಗಿಯಾಗಿ ಬೆಳೆಸಲು 30 ವರ್ಷಗಳ ಕಾಲ ಪುರುಷನ ವೇಷ ಧರಿಸಿ ಜೀವನ ನಡೆಸಿರುವ ಘಟನೆ ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ನಡೆದಿದೆ.
ಮುವತ್ತು ವರ್ಷದ ಹಿಂದೆ ಪೆಚಿಯಮ್ಮಾಳ್ ಎಂಬವರು ಮದುವೆಯಾಹಿ ಸ್ವಲ್ಪ ದಿನದಲ್ಲೇ ಹೃದಯಾಘಾತದಿಂದ ತನ್ನ ಪತಿಯನ್ನು ಕಳೆದುಕೊಂಡಿದ್ದು, ಬಳಿಕ ಹೆಣ್ಣು ಮಗುವಿಗೆ ಜನ್ಮ ನೀಡಿದ ಪೆಚಿಯಮ್ಮಾಳ್ ಕೆಲಸ ಮಾಡಲು ಪ್ರಾರಂಭಿಸಿದ್ದರು. ಆದರೆ ಈ ವೇಳೆಯಲ್ಲಿ ಆಕೆ ಕಿರುಕುಳವನ್ನು ಅನುಭವಿಸಿದ್ದು, ತನ್ನ ಮಗಳನ್ನು ಚೆನ್ನಾಗಿ ಸಾಕಲು ನಿರ್ಧಾರ ಮಾಡಿದ ಆಕೆ ತನ್ನನ್ನು ಪುರುಷನಂತೆ ವೇಷ ಧರಿಸಲು ನಿರ್ಧರಿಸಿ ಮುತ್ತು ಆಗಿ ಪರವರ್ತನೆ ಆಗಿದ್ದಾಳೆ.
ಇನ್ನು ಪೆಚಿಯಮ್ಮಾಳ್ ಪುರುಷನಂತೆ ಕಾಣಲು ತನ್ನ ಕೂದಲನ್ನು ಕತ್ತರಿಸಿ ಲುಂಗಿ ಮತ್ತು ಶರ್ಟ್ ಧರಿಸಲು ಪ್ರಾರಂಭಿಸಿದ್ದು, ಕಳೆದ ಮೂರು ದಶಕಗಳಿಂದ(ಮುವತ್ತು ವರ್ಷದಿಂದ) ಚೆನ್ನೈನ ಹೋಟೆಲ್ ಗಳು, ಚಹಾ ಅಂಗಡಿಗಳು ಮುಂತಾದ ಅನೇಕ ಸ್ಥಳಗಳಲ್ಲಿ ಕೆಲಸ ಮಾಡಿದ್ದು, ಅವಳನ್ನು 'ಅನ್ನಾಚಿ' (ಪುರುಷನ ಸಾಂಪ್ರದಾಯಿಕ ಹೆಸರು) ಎಂದು ಕರೆಯಲಾಗುತ್ತಿತ್ತು.
ನಾನು ಪೇಂಟರ್, ಟೀ ಮಾಸ್ಟರ್, ಪರೋಟಾ ಮಾಸ್ಟರ್ ಆಗಿ ಕೆಲಸ ಮಾಡುವುದರಿಂದ ಹಿಡಿದು ಎಲ್ಲಾ ರೀತಿಯ ಕೆಲಸಗಳನ್ನು ಮಾಡಿದ್ದೇನೆ. ನನ್ನ ಮಗಳಿಗೆ ಸುರಕ್ಷಿತ ಜೀವನವನ್ನು ಖಚಿತಪಡಿಸಿಕೊಳ್ಳಲು ನಾನು ಪ್ರತಿ ಪೈಸೆಯನ್ನು ಉಳಿಸಿದ್ದು, ಕೆಲವು ದಿನಗಳ ನಂತರ ನನ್ನ ಹೆಸರು ಮುತ್ತು ಎಂದಾಯಿತು. ನಂತರ ಆಧಾರ್, ವೋಟರ್ ಐಡಿ ಮತ್ತು ಬ್ಯಾಂಕ್ ಖಾತೆ ಸೇರಿದಂತೆ ಎಲ್ಲಾ ದಾಖಲೆಗಳಲ್ಲಿ ಅದನ್ನು ನಮೂದಿಸಲಾಯಿತು ಅಂತ ಪೆಚಿಯಮ್ಮಾಳ್ ಹೇಳಿದ್ದಾರೆ.