ಕಲಬುರಗಿ, ಮೇ 13 (DaijiworldNews/HR): ಪಿಎಸ್ಐ ಪರೀಕ್ಷಾ ಅಕ್ರಮದ ಕುರಿತು ನಡೆಸುತ್ತಿರುವ ಸಿಐಡಿ ತನಿಖೆಯ ದಿಕ್ಕನ್ನು ರಾಜ್ಯ ಸರ್ಕಾರ ತಪ್ಪಿದೆ. ರಾಜ್ಯದ ನಾನಾ ಕಡೆಗಳಲ್ಲಿ ಅಕ್ರಮಗಳು ಬಯಲಾಗುತ್ತಿದ್ದರೂ ತನಗೇನು ಸಂಬಂಧವೇ ಇಲ್ಲ ಎನ್ನುವಂತೆ ಸರಕಾರ ವರ್ತನೆ ಮಾಡುತ್ತಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಪಿಎಸ್ಐ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ರುದ್ರಗೌಡ ಸೇರಿದಂತೆ ಕಿಂಗ್ಪಿನ್ಗಳೇ ಸವಾಲು ಹಾಕುತ್ತಿದ್ದರೂ, ಮುಖ್ಯಮಂತ್ರಿಯಾದಿಯಾಗಿ ಗೃಹ ಸಚಿವರು ಸಮರ್ಪಕ ತನಿಖೆಗೆ ಆಸಕ್ತಿ ತೋರುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಇನ್ನು ವಿಚಾರಣೆ ವೇಳೆ ಉನ್ನತ ಅಧಿಕಾರಿಗಳು, ಮಂತ್ರಿಗಳ ಹೆಸರು ಹೇಳುತ್ತೇನೆ. ಬಂಧಿಸುತ್ತೀರಾ? ಎಂದು ರುದ್ರಗೌಡ ಪ್ರಶ್ನಿಸಿದ್ದಾನೆಂದು ಗೊತ್ತಾಗಿದೆ. ಆದರೂ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಮತ್ತು ತಂಡವನ್ನು ಉಳಿಸುವ ನಿಟ್ಟಿನಲ್ಲಿ ಇಡೀ ಸರಕಾರ ಒಂದು ಅಕ್ರಮವನ್ನು ಸರಿಯಾಗಿ ತನಿಖೆ ಮಾಡದೆ ಮುಚ್ಚಿ ಹಾಕುವ ನಿಟ್ಟಿನಲ್ಲಿ ಬೇಕಾದ ತಯಾರಿ ಮಾಡಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.