ಬೆಂಗಳೂರು, ಮೇ 13 (DaijiworldNews/HR): ಸದ್ಯದಲ್ಲೇ ಅಕಾಲಿಕ ಮರಣವನ್ನು ತಡೆಯಲು ದೀರ್ಘಾಯುಷ್ಯ ಮತ್ತು ಸಾಂಕ್ರಾಮಿಕ ರೋಗಗಳಿಗೆ ಲಸಿಕೆ/ಔಷಧಿ ಕಂಡುಹಿಡಿಯುವ ಇದ್ದೇಶದಿಂದ ಬೆಂಗಳೂರಿಲ್ಲಿ ದೀರ್ಘಾಯುಷ್ಯ (ಲಾಂಗಿವಿಟಿ ಸೆಂಟರ್) ಮತ್ತು ಸಾಂಕ್ರಾಮಿಕ ರೋಗ ಪರಿಹಾರ ಸಂಶೋಧನಾ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು, ಇದಕ್ಕೆ ದಿವಂಗತ ನಟ ಪುನೀತ್ ರಾಜಕುಮಾರ್ ಅವರ ಹೆಸರನ್ನು ಇಡಲಾಗುವುದು ಎಂದು ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.
ಈ ಕುರಿರು ಮಾತನಾಡಿದ ಅವರು, ಸಾಂಕ್ರಾಮಿಕ/ಅಸಾಂಕ್ರಾಮಿಕ ರೋಗಗಳನ್ನು ಪತ್ತೆ ಹಚ್ಚಲು ರಕ್ತ, ಎಂಜಲು, ಮಲ, ಮೂತ್ರ, ಕಫ ಇತ್ಯಾದಿಗಳನ್ನು ಸಂಗ್ರಹಿಸಲು ಸೂಕ್ತ ವ್ಯವಸ್ಥೆ ಬೇಕಾಗಿದ್ದು, ಇದಕ್ಕಾಗಿ ಬಿಬಿಸಿ ಉಪಕ್ರಮದಡಿಯಲ್ಲಿ ದೇಶದ ಮೊಟ್ಟಮೊದಲ ಬಯೋ-ಬ್ಯಾಂಕಿಂಗ್ ಮತ್ತು ಸಂಗ್ರಹ ಮಾದರಿಗಳ ಕೋಶವನ್ನು ಕೂಡ ಸ್ಥಾಪಿಸಲಾಗುವುದು. ಇದರಿಂದ ಇಡೀ ರಾಜ್ಯದಲ್ಲಿ ರೋಗನಿದಾನ ಶಾಸ್ತ್ರವು ಮತ್ತಷ್ಟು ವೈಜ್ಞಾನಿಕವಾಗಿ ನಡೆಯಲಿದೆ ಎಂದರು.
ಇನ್ನು ಆರೋಗ್ಯ ಕ್ಷೇತ್ರದಲ್ಲಿ ಆವಿಷ್ಕಾರದ ತುರ್ತಿದ್ದು, ಇಂದು ಬಿಡುಗಡೆಯಾಗಿರುವ ಸಾಧನಗಳಿಂದ ಡಿಎನ್ಎ/ಆರ್.ಎನ್.ಎ ಪರೀಕ್ಷೆಗಳು, ಕೋವಿಡ್ ಸ್ವಯಂ ಪರೀಕ್ಷೆ, ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆ, ವರ್ಚುಯಲ್ ರಿಯಾಲಿಟಿ ವಿಧಾನದಲ್ಲಿ ಕಣ್ಣಿನ ಪರೀಕ್ಷೆ, ಶ್ವಾಸಕೋಶ ಮತ್ತು ಹೃದಯದ ಮೇಲಿನ ಒತ್ತಡಗಳನ್ನು ಸುಲಭವಾಗಿ ಮತ್ತು ಶೀಘ್ರವಾಗಿ ಪತ್ತೆ ಹಚ್ಚಬಹುದು ಎಂದಿದ್ದಾರೆ.