ರಾಂಚಿ, ಮೇ 13 (DaijiworldNews/MS): ಅಮಿತ್ ಶಾ ವಿರುದ್ಧ ವಿವಾದಾತ್ಮಕ ಹೇಳಿಕೆ ಆರೋಪಕ್ಕಾಗಿ ಕೆಳ ನ್ಯಾಯಾಲಯವೊಂದು ಹೊರಡಿಸಿದ್ದ ವಾರೆಂಟ್ ವಿರುದ್ಧ ತಡೆಯಾಜ್ಞೆ ನೀಡಿದ್ದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರಿಗೆ ಜಾರ್ಖಂಡ್ ಹೈಕೋರ್ಟ್ ಗುರುವಾರ ರಿಲೀಫ್ ನೀಡಿದೆ.
"2019ರ ಲೋಕಸಭಾ ಚುನಾವಣೆ ವೇಳೆಯಲ್ಲಿ ಜಾರ್ಖಂಡ್ ನ ಚೈಬಾಸಾದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಮಿತ್ ಶಾ ವಿರುದ್ಧ "ಕೊಲೆಗಾರ ಬಿಜೆಪಿಯಲ್ಲಿ ಅಧ್ಯಕ್ಷರಾಗಬಹುದು ಆದರೆ, ಕಾಂಗ್ರೆಸ್ ನಲ್ಲಿ ಅದು ಸಾಧ್ಯವಿಲ್ಲ " ಎಂದು ಹೇಳಿಕೆ ನೀಡಿದ್ದರು.
ಈ ಸಂಬಂಧ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜಯ್ ದ್ವಿವೇದಿ ರಾಹುಲ್ ವಿರುದ್ಧ ಯಾವುದೇ ರೀತಿಯ ಬಲವಂತದ ಕ್ರಮಕ್ಕೆ ತಡೆಯಾಜ್ಞೆ ನೀಡಿದರು. ಮಾತ್ರವಲ್ಲದೆ ತೀರ್ಪಿನೊಂದಿಗೆ ಕೆಳ ನ್ಯಾಯಾಲಯದ ಪ್ರಕ್ರಿಯೆಗೆ ತಡೆ ನೀಡಿ, ಅರ್ಜಿದಾರರಿಗೆ ನೋಟಿಸ್ ನೀಡಲಾಗಿದೆ. ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಜಾರ್ಖಂಡ್ ಸರ್ಕಾರಕ್ಕೆ ನಿರ್ದೇಶನ ನೀಡಿದ್ದು, ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 26ಕ್ಕೆ ಮುಂದೂಡಿದೆ.