ನವದೆಹಲಿ, ಮೇ 13 (DaijiworldNews/MS): ಪಕ್ಷವು ತನ್ನ ಚುನಾವಣಾ ಭವಿಷ್ಯವನ್ನು ಪುನರುಜ್ಜೀವನಗೊಳಿಸುವ ಕಾರ್ಯತಂತ್ರದ ಭಾಗವಾಗಿ " ಒಂದು ಕುಟುಂಬ, ಒಂದೇ ಟಿಕೆಟ್" ಎಂಬ ನಿಯಮವನ್ನು ಕಾಂಗ್ರೆಸ್ ಅಂಗೀಕರಿಸಿದ್ದು ಆದರೆ, ಈ ನಿಯಮದಿಂದ 'ಗಾಂಧಿ' ಕುಟುಂಬ ಅನ್ವಯವಾಗುದಿಲ್ಲ ಎಂದು ವರದಿಯಾಗಿದೆ.
"ಒಂದು ಕುಟುಂಬ, ಒಂದು ಟಿಕೆಟ್" ಎಂಬ ಪ್ರಸ್ತಾಪವನ್ನು ಕಾಂಗ್ರೆಸ್ ಸಂಪೂರ್ಣವಾಗಿ ಒಪ್ಪಿದ್ದು, ಕನಿಷ್ಠ ಐದು ವರ್ಷಗಳ ಕಾಲ ಪಕ್ಷಕಾಗಿ ದುಡಿದರೆ ಮಾತ್ರ ಕುಟುಂಬದ ಇನ್ನೊಬ್ಬ ಸದಸ್ಯನಿಗೆ ಟಿಕೆಟ್ ಸಿಗುತ್ತದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಅಜಯ್ ಮಾಕನ್ ಸ್ಪಷ್ಟಪಡಿಸಿದ್ದಾರೆ.
"ನಿರಂತರವಾಗಿ ಹುದ್ದೆಯಲ್ಲಿರುವ ಯಾವುದೇ ವ್ಯಕ್ತಿ ಆ ಹುದ್ದೆಯಿಂದ ಕೆಳಗಿಳಿಯಬೇಕಾಗುತ್ತದೆ ಮತ್ತು ಅದೇ ಹುದ್ದೆಗೆ ಹಿಂತಿರುಗಬೇಕಾದರೆ ಮೂರು ವರ್ಷಗಳ ಕಾಯಬೇಕಾಗುತ್ತದೆ. ಪ್ರತಿ ಹಂತದಲ್ಲೂ ಯುವಕರಿಗೆ ಸಂಸ್ಥೆಯಲ್ಲಿ ಶೇ.50ರಷ್ಟು ಜಾಗ ನೀಡಬೇಕು ಎಂದು ಚಿಂತನ ಶಿಬಿರದಲ್ಲಿ ಪ್ರಸ್ತಾಪಿಸಲಾಗಿದೆ "ಎಂದು ಅಜಯ್ ಮಾಕನ್ ಹೇಳಿದ್ದಾರೆ.
ವರದಿಯ ಪ್ರಕಾರ, 'ಒಂದು ಕುಟುಂಬ, ಒಂದು ಟಿಕೆಟ್' ನಿಯಮವನ್ನುಕಾಂಗ್ರೆಸ್ನಲ್ಲಿ ಸಂಪೂರ್ಣ ಸಹಮತದಿಂದ ಅನುಮೋದಿಸಿದರೂ, ಈ ನಿಯಮ ಗಾಂಧಿ ಕುಟುಂಬಕ್ಕೆ ಅನ್ವಯಿಸುವುದಿಲ್ಲ ಎಂದು ತಿಳಿದುಬಂದಿದೆ.
ಇನ್ನೊಂದೆಡೆ ರಾಜಸ್ಥಾನದ ಉದಯಪುರದಲ್ಲಿ ಕಾಂಗ್ರೆಸ್ನ ಚಿಂತನ-ಮಂಥನ ಮೂರು ದಿನಗಳ ನವ ಸಂಕಲ್ಪ ಶಿಬಿರ ಆರಂಭವಾಗಲಿದ್ದು, ದೇಶದ ವಿವಿಧ ಭಾಗಗಳಿಂದ ಕಾಂಗ್ರೆಸ್ ಮುಖಂಡರು ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.