ದೆಹಲಿ, ಮೇ 12 (DaijiworldNews/DB): ಐಟಿ ಸಂಸ್ಥೆಯೊಂದರ ಮೇಲೆ ನಕಲಿ ದಾಳಿ ನಡೆಸಿದ ಆರೋಪದ ಮೇಲೆ ನಾಲ್ವರು ಸಿಬಿಐ ಅಧಿಕಾರಿಗಳನ್ನು ಚಂಡೀಗಢ ಪೊಲೀಸರು ಬಂಧಿಸಿದ್ದಾರೆ.
ಚಂಡೀಗಢಕ್ಕೆ ಈ ನಾಲ್ವರನ್ನೂ ನಿಯೋಜಿಸಿರಲಿಲ್ಲ. ಆದರೂ ಶೋಧ ಕಾರ್ಯಕ್ಕೆ ಹೋಗಿದ್ದರು. ಈ ವೇಳೆ ಅವರನ್ನು ಐಟಿ ಸಂಸ್ಥೆಯ ಪ್ರಮುಖರು ಪ್ರಶ್ನಿಸಿ ಆದೇಶ ಪ್ರತಿ ತೋರಿಸುವಂತೆ ಹೇಳಿದಾಗ, ಇಂತಹ ಕಾರ್ಯಾಚರಣೆಗೆ ಯಾವುದೇ ಆದೇಶ, ಪ್ರಕರಣ ಇರುವುದಿಲ್ಲ ಎಂದು ಹೇಳಿದ್ದರು. ಆದರೆ ಅಧಿಕಾರಿಗಳ ವರ್ತನೆ ಬಗ್ಗೆ ಅನುಮಾನಗೊಂಡ ಸಂಸ್ಥೆಯ ನೌಕರರು ಅವರನ್ನು ಕೂಡಿ ಹಾಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಬಂದು ವಿಚಾರಿಸಿದಾಗ ಇದು ನಕಲಿ ದಾಳಿ ಎಂದು ಗೊತ್ತಾಗಿತ್ತು.
ಹಣ ವಸೂಲಿ ಮಾಡುವ ಉದ್ದೇಶದಿಂದ ಸಿಬಿಐಯ ನಾಲ್ವರು ಅಧಿಕಾರಿಗಳು ಈ ಸಂಸ್ಥೆ ಮೇಲೆ ದಾಳಿ ನಡೆಸಿದ್ದರು. ಭ್ರಷ್ಟಾಚಾರ ನೀತಿಯ ಬಗ್ಗೆ ಏಜೆನ್ಸಿ ಶೂನ್ಯ ಸಹಿಷ್ಣುತೆ ಹೊಂದಿದೆ. ಅದರ ಪ್ರಕಾರವೇ ಆರೋಪಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಸಿಬಿಐ ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.