ಬೆಂಗಳೂರು, ಮೇ 12 (DaijiworldNews/DB): ಎಂ.ಬಿ. ಪಾಟೀಲ್ ಮತ್ತು ರಮ್ಯಾ ಇಬ್ಬರೂ ನಮ್ಮ ಪಕ್ಷಕ್ಕೆ ಬೇಕಾದವರು. ಅಪಾರ್ಥದಿಂದಾಗಿ ಕೆಲವು ಗೊಂದಲಗಳು ಏರ್ಪಟ್ಟಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಮಾಜಿ ಸಂಸದೆ ರಮ್ಯಾ ಅವರ ಟ್ವೀಟ್ ವಿಚಾರವಾಗಿ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರು ಗುರುವಾರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಎಂ.ಬಿ. ಪಾಟೀಲ್ ಮನೆಗೆ ಅಶ್ವತ್ಥ ನಾರಾಯಣ ಹೋಗಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ರಕ್ಷಣೆ ಮಾಡಲು ಹೋಗಿರಬಹುದು ಎಂದಿದ್ದೆ. ಆದರೆ ಬೇರೇನೂ ಹೇಳಿಲ್ಲ. ಯಾರಿಗಾದರೂ ಇದರಿಂದ ನೋವಾಗಿದ್ದರೆ ಅದನ್ನು ಪಕ್ಷದ ವೇದಿಕೆಯಲ್ಲೇ ಚರ್ಚಿಸಬೇಕು. ಅನಗತ್ಯ ವಿವಾದ ಎಬ್ಬಿಸುವುದು ಸರಿಯಲ್ಲ ಎಂದರು.
ಸರ್ಕಾರ ಭ್ರಷ್ಟಾಚಾರ, ಅಕ್ರಮ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದೆ. ಈ ಬಗ್ಗೆ ಚರ್ಚೆ ಮಾಡಬೇಕೇ ಹೊರತು ಬೇರೆ ವಿಚಾರಗಳ ಬಗ್ಗೆ ಅಲ್ಲ. ಪಿಎಸ್ಐ ಹಗರಣ, ಎಫ್ ಡಿಎ, ಕಿರಿಯ ಇಂಜಿನಿಯರ್ ನೇಮಕ ವಿಚಾರದ ಕುರಿತು ತನಿಖೆಯಾಗಬೇಕು. ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಬಂಧಿತರಾದವರು ಜೆಇ ಹುದ್ದೆ ಅಕ್ರಮದಲ್ಲಿಯೂ ಭಾಗಿಯಾಗಿರುವ ಬಗ್ಗೆ ಹೇಳಿಕೊಂಡಿದ್ದು, ಅದರ ಬಗ್ಗೆ ತನಿಖೆಗೆ ಸರ್ಕಾರ ಮುಂದಾಗುತ್ತಿಲ್ಲ. ಇಲ್ಲಿ 300 ಕೋಟಿ ರೂ . ಅವ್ಯವಹಾರ ನಡೆದಿದೆ ಎಂಬ ಕುಮಾರಸ್ವಾಮಿ ಆರೋಪದಲ್ಲಿ ಸತ್ಯಾಂಶವಿದೆ. ಹಾಗಾಗಿ ಈ ವಿಚಾರ ಮುನ್ನೆಲೆಗೆ ಬರಬೇಕಾಗಿದೆ ಎಂದವರು ತಿಳಿಸಿದರು.
ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿಯವರು ಬೇರೆ ವಿಚಾರಗಳನ್ನು ದೊಡ್ಡದಾಗಿ ಬಿಂಬಿಸುತ್ತಿದ್ದಾರೆ. ಪಿಎಸ್ಐ ಅಥವಾ ಇತರ ನೇಮಕಾತಿ ವಿಚಾರದಲ್ಲಿ ನಾವು ಮೌನ ವಹಿಸಿಲ್ಲ. 40 ಪರ್ಸೆಂಟ್ ಕಮಿಷನ್, ನೇಮಕಾತಿ ಅಕ್ರಮ ನಮ್ಮ ಪ್ರಮುಖ ಅಜೆಂಡಾವಾಗಿದ್ದು, ಇದು ತಾರ್ಕಿಕ ಅಂತ್ಯ ಕಾಣುವಲ್ಲಿ ತನಕ ಹೋರಾಡಲಿದ್ದೇವೆ. ತನಿಖೆಯನ್ನು ಸರ್ಕಾರ ಹೇಗೆ ನಡೆಸುತ್ತಿದೆ ನೋಡೋಣ. ಸಮಯ ಬಂದಾಗ ಕಾಂಗ್ರೆಸ್ ಮಾತನಾಡಲಿದೆ ಎಂದರು.