ವಿಶಾಖಪಟ್ಟಣ, ಮೇ 12 (DaijiworldNews/DB): ತಾಳು ಕಟ್ಟಲು ಕೆಲವೇ ನಿಮಿಷ ಬಾಕಿ ಇರುವಾಗಲೇ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ವಧು ಮೃತಪಟ್ಟ ಘಟನೆ ಆಂಧ್ರದ ವಿಶಾಖಪಟ್ಟಣದಲ್ಲಿ ನಡೆದಿದೆ.
ಸೃಜನಾ ಮೃತಪಟ್ಟ ವಧು. ಮಧುರವಾಡದಲ್ಲಿ ತಾಳಿ ಕಟ್ಟುವ ಶಾಸ್ತ್ರಕ್ಕಿಂತ ಮೊದಲು ವರ ಮತ್ತು ವಧು ವೀಳ್ಯದೆಲೆ ಶಾಸ್ತ್ರದಲ್ಲಿ ಭಾಗಿಯಾಗಿದ್ದರು. ಈ ವೇಳೆ ದಿಢೀರನೆ ವಧು ಕುಸಿದು ಬಿದ್ದಿದ್ದಾಳೆ. ತತ್ಕ್ಷಣ ವಧುವನ್ನು ಕುಟುಂಬ ಸದಸ್ಯರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆ ವೇಳೆಗಾಗಲೇ ಆಕೆ ಮೃತಪಟ್ಟಿದ್ದಾಳೆ.
ಸಂಭ್ರಮದಲ್ಲಿದ್ದ ಮನೆಯಲ್ಲಿ ಇದೀಗ ಸೂತಕದ ಛಾಯೆ ಆವರಿಸಿದೆ. ವಧುವಿನ ಸಾವಿನಿಂದಾಗಿ ಎರಡೂ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ.