ಹರಿದ್ವಾರ, ಮೇ 12 (DaijiworldNews/DB): ವರ್ಷದೊಳಗೆ ಮೊಮ್ಮಗುವನ್ನು ಹೆತ್ತು ಕೊಡಬೇಕು, ಇಲ್ಲವಾದರೆ 5 ಕೋಟಿ ರೂ. ಪರಿಹಾರ ನೀಡಬೇಕು ಎಂದು ಮಗ-ಸೊಸೆಯ ವಿರುದ್ದವೇ ವೃದ್ದ ದಂಪತಿಯೊಂದು ಕೋರ್ಟ್ಗೆ ಹೋದ ಅಪರೂಪದ ಘಟನೆ ಹರಿದ್ವಾರದಲ್ಲಿ ನಡೆದಿದೆ.
ಇಳಿ ವಯಸ್ಸಿನಲ್ಲಿ ಮಕ್ಕಳು ಆಸರೆಯಾಗುತ್ತಾರೆ, ಮೊಮ್ಮಕ್ಕಳನ್ನು ಆಡಿಸಿ ಖುಷಿ ಪಡಬೇಕು ಎಂದು ಆಸೆ ಪಡುವ ಹಿರಿ ಜೀವಗಳು ಅವೆರಡೂ ಸಿಗದೇ ಇದ್ದಾಗ ಬಹಳಷ್ಟು ನೊಂದುಕೊಳ್ಳುತ್ತಾರೆ. ಈ ಘಟನೆಯಲ್ಲಿಯೂ ಹಾಗೇ ಆಗಿದೆ. 2016ರಲ್ಲಿ ಮಗನ ಮದುವೆ ನಡೆದರೂ, ಮೊಮ್ಮಗುವನ್ನು ಹೆರಲಿಲ್ಲ. ಮೊಮ್ಮಗು ಆಡಿಸುವ ಕನಸು ನನಸಾಗಿಲ್ಲ. ಮಗನನ್ನು ಚೆನ್ನಾಗಿ ಓದಿಸಿ ಅಮೆರಿಕಾದಲ್ಲಿ ತರಬೇತಿ ಕೊಡಿಸಿದ್ದೇನೆ. ಇದ್ದ ಹಣವನ್ನೆಲ್ಲಾ ಆತನಿಗಾಗಿ ಖರ್ಚು ಮಾಡಿದ್ದೇನೆ. ಮನೆ ಕಟ್ಟಲು ಬ್ಯಾಂಕ್ ಸಾಲ ಪಡೆದುಕೊಂಡಿದ್ದು, ಸಾಲ ತೀರಿಸಲೂ ನನ್ನ ಬಳಿ ಹಣವಿಲ್ಲದಾಗಿದೆ. ಹೀಗಾಗಿ ಈ ಕ್ರಮ ನಮಗೆ ಅನಿವಾರ್ಯವಾಗಿದೆ ಎಂದು ಮಗನ ವಿರುದ್ದವೇ ಕೋರ್ಟ್ ಮೊರೆ ಹೋದ ತಂದೆ ಎಸ್. ಆರ್. ಪ್ರಸಾದ್ ತಿಳಿಸಿದ್ದಾರೆ.
ಮಗ ಮತ್ತು ಸೊಸೆ ಇಬ್ಬರೂ ತಲಾ 2.5 ಕೋಟಿ ರೂ. ಪರಿಹಾರ ನೀಡಬೇಕು. ಇಲ್ಲವೇ ವರ್ಷದೊಳಗೆ ಮಗುವನ್ನು ಹೆರಬೇಕು. ಮೊಮ್ಮಗುವನ್ನು ಆಡಿಸುವ ಭಾಗ್ಯ ನಮ್ಮದಾಗಬೇಕೆಂಬ ಆಸೆ ಇದೆ ಎಂದಿದ್ದಾರೆ.
ವೃದ್ದ ದಂಪತಿಯ ಪರಿಸ್ಥಿತಿ ಗಮನಿಸಿದಾಗ ಸಮಾಜದ ಪ್ರಸ್ತುತ ವಾಸ್ತವದ ಅರಿವಾಗುತ್ತದೆ. ಮಕ್ಕಳ ಮೇಲೆ ಎಲ್ಲಾ ಬಂಡವಾಳ ಹಾಕಿ ಉತ್ತಮ ಉದ್ಯೋಗ ಹಿಡಿಯುವಂತೆ ಮಾಡುವ ಪೋಷಕರನ್ನು ಕೊನೆಗಾಲದಲ್ಲಿ ಮಕ್ಕಳು ನೋಡಿಕೊಳ್ಳದಿರುವುದು ದುರದೃಷ್ಟಕರ. ಕನಿಷ್ಠ ಹಣಕಾಸಿನ ನೆರವನ್ನಾದರೂ ನೀಡಬೇಕು. ಇಲ್ಲವಾದಲ್ಲಿ ಮೊಮ್ಮಗು ಬೇಕು ಎಂಬುದೇ ಈ ವೃದ್ದ ದಂಪತಿಯ ಒತ್ತಾಯ ಎಂದು ದಂಪತಿ ಪರ ವಾದಿಸಲಿರುವ ನ್ಯಾಯವಾದಿ ಎ. ಕೆ. ಶ್ರೀವಾಸ್ತವ ತಿಳಿಸಿದ್ದಾರೆ.