ಬೆಂಗಳೂರು , ಮೇ 12 (DaijiworldNews/MS): ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಟ್ವೀಟ್ ವಾರ್ ನಡುವೆ ಬಿಜೆಪಿ ಎಂಟ್ರಿ ಕೊಟ್ಟಿದ್ದು, "ನೀನೇ ಸಾಕಿದಾ ಗಿಣಿ ಹದ್ದಾಗಿ ಕುಕ್ಕಿತಲ್ಲೋ" ಎಂದು ವ್ಯಂಗ್ಯವಾಡಿದೆ.
ಈ ಬಗ್ಗೆ ಸಸ್ರಣಿ ಟ್ವಿಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ , " ನೀನೇ ಸಾಕಿದ ಗಿಣಿ, ನಿನ್ನ ಮುದ್ದಿನ ಗಿಣಿ, ಹದ್ದಾಗಿ ಕುಕ್ಕಿತ್ತಲ್ಲೋ" ಎಂದಿರುವ ಬಿಜೆಪಿ, ಇದು ಅಸಹಾಯಕ ಡಿಕೆಶಿ ಅವರ ಸದ್ಯದ ಸ್ಥಿತಿ. ಡಿಕೆಶಿ ಅವರೇ ಬೆಳೆಸಿದ ರಮ್ಯಾ ಈಗ ಡಿಕೆಶಿಗೆ ಸಾಮಾಜಿಕ ಮಾಧ್ಯಮದಲ್ಲಿ ಬುದ್ಧಿ ಮಾತು ಹೇಳುತ್ತಿದ್ದಾರೆ. ರಮ್ಯಾ ಅವರನ್ನು ಭ್ರಷ್ಟಾಧ್ಯಕ್ಷರ ವಿರುದ್ಧ ಛೂಬಿಟ್ಟಿದ್ದು ಮೀರ್ಸಾದಿಕ್ ಅವರಿರಬಹುದೇ? " ಎಂದು ಕುಹಕವಾಡಿದೆ.
"ಕಾಂಗ್ರೆಸ್ ಒಂದು ಒಡೆದ ಮನೆ. ಇಲ್ಲಿ ಯಾರ ಅಭಿಪ್ರಾಯವನ್ನು ಯಾರು ಸಮರ್ಥಿಸುತ್ತಾರೆ, ಯಾರು ವಿರೋಧಿಸುತ್ತಾರೆ ಎಂಬುದು ಯಾರಿಗೂ ಗೊತ್ತಿಲ್ಲ.ಎಂ.ಬಿ. ಪಾಟೀಲ್ ಹಾಗೂ ಅಶ್ವತ್ಥ್ ನಾರಾಯಣ ಅವರ ಭೇಟಿಯ ಬಗ್ಗೆ ಮಾತನಾಡಿದ ಅಸಹಾಯಕ ಡಿಕೆಶಿ ಅವರೀಗ ತಮ್ಮ ಸ್ವಂತ ಮನೆಯಲ್ಲೇ ಉಪವಾಸ ಮಾಡುವ ಸ್ಥಿತಿಯಲ್ಲಿದ್ದಾರೆ .ಹೀಗೇಕಾಯಿತು ಶಿವಕುಮಾರ್ ಅವರೇ" ಎಂದು ಪ್ರಶ್ನಿಸಿದೆ
"ಮೀರ್ಸಾದಿಕ್ ಬಣದ ಜೊತೆಗೆ, ಅಸಹಾಯಕ ಡಿಕೆಶಿ ಅವರ ವಿರೋಧಿಗಳ ಸಾಲಿಗೆ ಈಗ ಮಾಜಿ ಸಂಸದೆ ರಮ್ಯಾ ಕೂಡಾ ಸೇರಿದ್ದಾರೆ. ಡಿಕೆಶಿ ಅವರೇ, ಸಹೋದರ ಡಿ.ಕೆ.ಸುರೇಶ್ ಅವರಾದರೂ ನಿಮ್ಮ ಜೊತೆ ನಿಲ್ಲಬಹುದೇ.? ಭ್ರಷ್ಟಾಧ್ಯಕ್ಷ ಡಿಕೆಶಿ ಅವರೇ, ನೀವು ನಿಜಕ್ಕೂ ಕೆಪಿಸಿಸಿ ಅಧ್ಯಕ್ಷರೇ?" ಎಂದು ಕೇಳಿದೆ.
"ಇದರ ಹಿಂದೆ ಮೀರ್ಸಾದಿಕ್ ಕೈವಾಡವಿದೆ, ಎಚ್ಚರವಿರಲಿ ಎಂದಿರುವ ಬಿಜೆಪಿ, ಮಾನ್ಯ ಡಿಕೆಶಿ ಅವರೇ, ನಿಮ್ಮ ಹೇಳಿಕೆಯನ್ನು ಪಕ್ಷದ ವೇದಿಕೆಯಲ್ಲಿ ಪ್ರಶ್ನಿಸುತ್ತೇನೆ ಎಂದು ಎಂಬಿ ಪಾಟೀಲ್ ಹೇಳಿದ್ದಾರೆ. ದೆಹಲಿ ವರಿಷ್ಠರ ಮುಂದೆಯೇ ನಿಮ್ಮ ನಾಯಕತ್ವದ ಪ್ರಶ್ನೆಗೆ ವೇದಿಕೆ ಸಿದ್ದವಾಗುತ್ತಿದೆಯೇ. ಚುನಾವಣೆಯ ಹೊಸ್ತಿಲಲ್ಲಿ ಡಿಕೆ ಶಿವಕುಮಾರ್ ಜೊತೆ ಎಷ್ಟು ಮಂದಿ ನಿಲ್ಲಬಹುದು ಎಂದು ಕಾಂಗ್ರೆಸಿಗರು ಈಗಲೇ ನಿರ್ಧರಿಸಿರಬಹುದು" ಅಂತ ಟೀಕಿಸಿದೆ.