ವಾರಾಣಸಿ, ಮೇ 12 (DaijiworldNews/DB): ಜ್ಞಾನವಾಪಿ ಮಸೀದಿಯೊಳಗೆ ಮೇ 17ರೊಳಗೆ ಸರ್ವೇಕ್ಷಣೆ ನಡೆಸುವಂತೆ ವಾರಣಾಸಿಯ ವಿಶೇಷ ಕೋರ್ಟ್ ಗುರುವಾರ ಮಹತ್ವದ ಆದೇಶ ನೀಡಿದೆ.
ಮಸೀದಿಯೊಳಗೆ ವೀಡಿಯೋ ಚಿತ್ರೀಕರಣಕ್ಕೂ ಕೋರ್ಟ್ ಆದೇಶಿಸಿದ್ದು, ಸರ್ವೇಕ್ಷಣೆ ನಡೆಸಲು ಕೋರ್ಟ್ ಕಮಿಷನರ್ ಅಜಯ್ ಮಿಶ್ರಾ ನೇತೃತ್ವದ ತಂಡಕ್ಕೆ ಜವಾಬ್ದಾರಿ ವಹಿಸಿದೆ.
ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲೇ ಈ ಮಸೀದಿ ಇದ್ದ ಕಾರಣ ಹಿಂದೂ ಮತ್ತು ಮುಸ್ಲಿಂ ಸಮುದಾಯದ ನಡುವೆ ವಿವಾದಗಳು ನಡೆದಿದ್ದವು. ಪುರಾತನ ಹಿಂದೂ ದೇವಾಲಯ ಕೆಡವಿ ಮಸೀದಿ ಕಟ್ಟಲಾಗಿದೆ ಎಂಬುದು ಹಿಂದೂಗಳ ಆರೋಪವಾಗಿತ್ತು. ಅಲ್ಲದೆ, ಮಸೀದಿಯಲ್ಲಿ ಹಿಂದು ದೇವರ ವಿಗ್ರಹಗಳ ಕುರುಹುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಅಲ್ಲಿ ಸರ್ವೇಕ್ಷಣೆ ನಡೆಸಬೇಕೆಂದು ಕೋರಿ ಐವರು ಮಹಿಳೆಯರು ಕಳೆದ ವರ್ಷ ಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲದೆ ನಿತ್ಯ ದೇವರಿಗೆ ಪೂಜೆ ಆಗಬೇಕು. ವಿಗ್ರಹಗಳಿಗೆ ಯಾವುದೇ ಹಾನಿ ಆಗದಂತೆ ಭದ್ರತೆ ಕಲ್ಪಿಸಬೇಕೆಂದು ಕೋರಲಾಗಿತ್ತು. ಏಪ್ರಿಲ್ 26ರಂದು ಈ ಅರ್ಜಿ ವಿಚಾರಣೆ ನಡೆಸಿದ ವಾರಾಣಸಿಯ ಸಿವಿಲ್ ಕೋರ್ಟ್, ವೀಡಿಯೋ ಸರ್ವೆ ನಡೆಸಿ ಮೇ 10ರೊಳಗೆ ವರದಿ ಸಲ್ಲಿಸಬೇಕೆಂದು ಅಡ್ವೊಕೇಟ್ ಆಯುಕ್ತರಿಗೆ ಸೂಚಿಸಿದ್ದರು. ಆದರೆ ವಿಡಿಯೋ ರೆಕಾರ್ಡ್ ಮಾಡಲು ಮುಸ್ಲಿಂ ಸಮುದಾಯದಿಂದ ಅಡ್ಡಿ ಎದುರಾಗಿತ್ತು. ಹೀಗಾಗಿ ಮೇ 9ರಂದು ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಗುರುವಾರಕ್ಕೆ ತೀರ್ಪು ಕಾಯ್ದಿರಿಸಿತ್ತು.
ಕೋರ್ಟ್ ಮೆಟ್ಟಿಲೇರಿದ್ದ ಐವರು ಹಿಂದೂ ಮಹಿಳೆಯರ ಪೈಕಿ ರಾಖಿ ಸಿಂಗ್ ಎಂಬಾಕೆ ತಮ್ಮ ಅರ್ಜಿಯನ್ನು ಬಳಿಕ ಹಿಂಪಡೆದುಕೊಂಡಿದ್ದರು. ಇದಲ್ಲದೆ, ಮೊಘಲ್ ದೊರೆ ಔರಂಗಜೇಬನ ಆದೇಶದಂತೆ ಕಾಶಿ ವಿಶ್ವನಾಥ ಮಂದಿರದ ಒಂದು ಭಾಗ ಕೆಡವಿ ಅಲ್ಲಿ ಮಸೀದಿ ಕಟ್ಟಲಾಗಿದೆ. ಹೀಗಾಗಿ ಇಡೀ ಮಸೀದಿ ಕಾಂಪ್ಲೆಕ್ಸ್ನ್ನು ಸರ್ವೇಕ್ಷಣೆ ನಡೆಸಿ, ಹಿಂದೂ ದೇವರ ವಿಗ್ರಹಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕೆಂದು ಕೋರಿ 1991ರಲ್ಲಿ ವಾರಾಣಸಿ ಜಿಲ್ಲಾ ನ್ಯಾಯಾಲಯಕ್ಕೆ ಬಹುತೇಕ ಅರ್ಜಿಗಳು ಬಂದಿದ್ದವು. ಆದರೆ ಸರ್ವೇಕ್ಷಣಕ್ಕೆ ತಡೆ ನೀಡಿ 2021 ಸೆಪ್ಟೆಂಬರ್ 9ರಂದು ಅಲಹಾಬಾದ್ ಹೈಕೋರ್ಟ್ ಆದೇಶಿಸಿತ್ತು. ಆ ಬಳಿಕ ಐವರು ಮಹಿಳೆಯರು ಇಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದರು. ಸರ್ವೇಕ್ಷಣೆಗೂ ಬೇಡಿಕೆ ಮುಂದಿಟ್ಟಿದ್ದರು. ಅದರಂತೆ ಪ್ರಸ್ತುತ ನ್ಯಾಯಾಲಯದ ಆದೇಶ ಹೊರಬಿದ್ದಿದೆ.
ಹಿಂದೂಗಳ ಪರ ವಾದ ಮಾಡುತ್ತಿರುವ ನ್ಯಾಯವಾದಿ ಹರಿಶಂಕರ್ ಜೈನ್ ಹೇಳುವ ಪ್ರಕಾರ, ಮಂದಿರದ ಗುರುತುಗಳನ್ನು ಹಂತಹಂತವಾಗಿ ಮಸೀದಿಯೊಳಗಿನಿಂದ ನಾಶ ಮಾಡಲಾಗುತ್ತಿದೆ. ದೇವಳ ಅಲ್ಲಿ ಇತ್ತೆಂಬುದಕ್ಕೆ ಸಾಕ್ಷಿ ಸಿಗಬೇಕಾದರೆ ಅಲ್ಲಿ ಸರ್ವೇಕ್ಷಣೆ ನಡೆಸುವ ಅಗತ್ಯ ತುಂಬಾ ಇದೆ ಎಂದಿದ್ದಾರೆ.