ಬೆಂಗಳೂರು, ಮೇ 12 (DaijiworldNews/MS): ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ತಾವು ಪಕ್ಷದ ಜವಾಬ್ದಾರಿಗಳನ್ನು ತ್ಯಜಿಸಿದ ಬಳಿಕ ತಮ್ಮ ವಿರುದ್ಧ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಯಿತು ಎಂದು ಆರೋಪಿಸಿದ್ದಾರೆ.
ಪಿಎಸ್ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಹಾಗೂ ಸಚಿವ ಅಶ್ವತ್ಥ್ ನಾರಾಯಣ್ ಅವರು ಗೌಪ್ಯವಾಗಿ ಭೇಟಿಯಾಗಿದ್ದರು ಎಂಬ ಡಿಕೆಶಿ ಆರೋಪದ ವಿರುದ್ದ ಎಂ.ಬಿ ಪಾಟೀಲ್ ಪರ ರಮ್ಯ ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲೇ ಡಿಕೆಶಿ ಬೆಂಬಲಿಗರು ರಮ್ಯ ಅವರ ಅವಹೇಳನ ಮಾಡುವ ಟ್ವೀಟ್ ಮಾಡುತ್ತಿದ್ದಾರೆ. ಈ ಟ್ವೀಟ್ಗಳನ್ನು ಹಂಚಿಕೊಂಡಿರುವ ರಮ್ಯ ಅವರು ಡಿಕೆಶಿ ಬೆಂಬಲಿಗರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನನ್ನನ್ನು ಟ್ರೋಲ್ ಮಾಡಿ ಎಂದು ಕಾಂಗ್ರೆಸ್ ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ಪಕ್ಷದ ಕಚೇರಿಯಿಂದ ಈ ರೀತಿಯ ಸಂದೇಶಗಳನ್ನು ಕಳುಹಿಸಲಾಗುತ್ತಿದೆ ಎಂದು ಆ ಸ್ಕ್ರೀನ್ ಶಾಟ್ ಗಳನ್ನು ಹಂಚಿಕೊಂಡಿದ್ದಾರೆ.
ನಾನು ರಾಜೀನಾಮೆ ನೀಡಿದ ಬಳಿಕ, 'ಆಕೆ ಕಾಂಗ್ರೆಸ್ಗೆ 8 ಕೋಟಿ ರೂ ವಂಚಿಸಿ ಪರಾರಿಯಾಗಿದ್ದಾಳೆ' ಎಂಬ ಸುಳ್ಳು ಸುದ್ದಿ ಪ್ರಚಾರ ಮಾಡಲಾಯಿತು. ನಾನು ನನ್ನ ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿದ್ದೆ. ನಾನು ನಿಜಕ್ಕೂ ಪಕ್ಷಕ್ಕೆ ಎಂಟು ಕೋಟಿ ರೂ ವಂಚನೆ ಮಾಡಿಲ್ಲ.ಕೆಸಿ ವೇಣುಗೋಪಾಲ್ ಅವರಿಗೆ ನನ್ನ ವಿನಮ್ರ ವಿನಂತಿ, ನೀವು ಮುಂದಿನ ಬಾರಿ ಕರ್ನಾಟಕಕ್ಕೆ ಯಾವಾಗ ಬರುತ್ತೀರೋ ಆಗ ಈ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿ ಎಂದು ಟ್ವೀಟ್ ಮಾಡಿ ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ದ ಅಸಮಧಾ ವ್ಯಕ್ತಪಡಿಸಿದ್ದಾರೆ .
ಅಲ್ಲದೆ , " ನನಗೆ ಅವಕಾಶಗಳನ್ನು ನೀಡಿ ಮತ್ತು ನನ್ನ ಜತೆಗೆ ಬೆಂಬಲವಾಗಿದ್ದವರು ಎಂದರೆ ಅವರು ರಾಹುಲ್ ಗಾಂಧಿ. ನನಗೆ ಅವಕಾಶಗಳನ್ನು 'ಕೊಟ್ಟಿರುವುದಾಗಿ' ಯಾರೇ ಹೇಳಿಕೊಂಡರೂ ಅವರೆಲ್ಲರೂ ಅವಕಾಶವಾದಿ " ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.