ನವದೆಹಲಿ, ಮೇ 12 (DaijiworldNews/DB): ಪಾಕ್ ಮಹಿಳೆಯ ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿ ಭಾರತೀಯ ಸೇನೆಯ ರಹಸ್ಯ ಮಾಹಿತಿಗಳನ್ನು ಸೋರಿಕೆ ಮಾಡಿದ ಆರೋಪದ ಮೇಲೆ ಭಾರತೀಯ ವಾಯುಪಡೆಯ ಅಧಿಕಾರಿಯೊಬ್ಬರನ್ನು ಬಂಧಿಸಲಾಗಿದೆ.
ದೇವೇಂದರ್ ನಾರಾಯಣ್ ಶರ್ಮಾ (32) ಬಂಧಿತ ಅಧಿಕಾರಿ. ನವದೆಹಲಿಯ ಸುಬ್ರೋತೊ ಪಾರ್ಕ್ ನಲ್ಲಿ ಎಎಎಫ್ ರೆಕಾರ್ಡ್ ಆಫೀಸ್ ನಲ್ಲಿ ಆಡಳಿತ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಈತ ಪಾಕ್ ಮೂಲದ ಮಹಿಳಾ ಏಜೆಂಟ್ವೊಬ್ಬಳ ಹನಿಟ್ರ್ಯಾಪ್ ಜಾಲಕ್ಕೆ ಈತ ಸಿಲುಕಿದ್ದ. ಆಕೆಯೊಂದಿಗೆ ಭಾರತದ ಭದ್ರತೆ, ರಕ್ಷಣೆ ಮತ್ತು ಸೇನಾ ಸಿಬಂದಿ ಕುರಿತಾದ ಮಾಹಿತಿಗಳನ್ನು ಈತ ಹಂಚಿಕೊಳ್ಳುತ್ತಿದ್ದ. ಕಂಪ್ಯೂಟರ್ ಮತ್ತಿತರ ದಾಖಲೆಗಳಿಂದ ಸೂಕ್ಷ್ಮ ಮಾಹಿತಿಗಳು ಸೋರಿಕೆಯಾಗಿರುವ ವಿಚಾರವನ್ನು ಪತ್ತೆ ಹಚ್ಚಿದಾಗ ಈತ ಪಾಕ್ ಮಹಿಳೆಗೆ ವಾಟ್ಸಾಪ್ನಲ್ಲಿ ರಹಸ್ಯ ಮಾಹಿತಿಗಳನ್ನು ಕಳುಹಿಸುತ್ತಿರುವುದು ಗೊತ್ತಾಗಿದೆ. ಅಲ್ಲದೆ, ಅದಕ್ಕಾಗಿ ಆಕೆಯಿಂದ ಆತ ಹಣವನ್ನೂ ಪಡೆಯುತ್ತಿರುವ ವಿಚಾರ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಅಧಿಕೃತ ರಹಸ್ಯ ಕಾಯ್ಡೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಮೇ 6 ರಂದು ದೆಹಲಿ ಅಪರಾಧ ವಿಭಾಗದ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಅಲ್ಲದೆ ಬಂಧಿತನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಆತನ ಬಳಿ ಇದ್ದ ಎಲೆಕ್ಟ್ರಾನಿಕ್ ಗ್ಯಾಡ್ಜೆಟ್ ಗಳು, ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.