ಠಾಣೆ, ಮೇ 11 (DaijiworldNews/DB): ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ದೂರು ಸಂಬಂಧ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ಖಾಯಂ ವಿನಾಯಿತಿ ನೀಡಬೇಕೆಂದು ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಮಹಾರಾಷ್ಟ್ರದ ಭಿವಂಡಿ ನ್ಯಾಯಾಲಯಕ್ಕೆ ರಾಹುಲ್ ಅರ್ಜಿ ಸಲ್ಲಿಸಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸುವಂತೆ ನ್ಯಾಯಾಧೀಶ ಜೆ.ವಿ. ಪಲಿವಾಲ್ ಅವರು ದೂರುದಾರ, ಆರ್ಆರ್ಎಸ್ ಕಾರ್ಯಕರ್ತ ರಾಜೇಶ್ ಕುಂಟೆ ಅವರಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ ಅರ್ಜಿ ವಿಚಾರಣೆಯನ್ನು ಮೇ 18ಕ್ಕೆ ಮುಂದೂಡಿದ್ದಾರೆ.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕೊಲೆ ಹಿಂದೆ ಆರೆಸ್ಸೆಸ್ ಕೈವಾಡ ಇದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದ ಹಿನ್ನೆಲೆಯಲ್ಲಿ ಆರೆಸ್ಸೆಸ್ ಘನತೆಗೆ ರಾಹುಲ್ ಹೇಳಿಕೆಯಿಂದ ದಕ್ಕೆ ಉಂಟಾಗಿದೆ ಎಂದು ಆರೋಪಿಸಿ 2014ರಲ್ಲಿ ಆರೆಸ್ಸೆಸ್ ಕಾರ್ಯಕರ್ತ ರಾಜೇಶ್ ಅವರು ದೂರು ದಾಖಲಿಸಿದ್ದರು.