ಬೆಂಗಳೂರು, ಮೇ 11 (DaijiworldNews/DB): ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಂಬಂಧಿಸಿದಂತೆ ಅಗತ್ಯ ಬಿದ್ದಲ್ಲಿ ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಪೊಲೀಸರು ನೋಟಿಸ್ ನೀಡಲಿದ್ದಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ಸಾಗುತ್ತಿದೆ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ವಿಚಾರಣೆ ಅಗತ್ಯವಿದ್ದಲ್ಲಿ ಪೊಲೀಸರು ಅವರಿಗೆ ನೊಟೀಸ್ ನೀಡಲಿದ್ದಾರೆ. ಅದನ್ನು ಪೊಲೀಸರೇ ತೀರ್ಮಾನಿಸುತ್ತಾರೆಯೇ ಹೊರತು ಇಲಾಖೆಯಲ್ಲ ಎಂದು ಸ್ಪಷ್ಟಪಡಿಸಿದರು.
ಸಿಐಡಿ ನೇಮಕಾತಿ ಅಕ್ರಮ ವಿಚಾರದಲ್ಲಿ ಶ್ರವಣಬೆಳಗೊಳದಲ್ಲಿ ಮಾಜಿ ಸಚಿವರೊಬ್ಬರ ಆಪ್ತನ ಬಂಧನ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಮಾಹಿತಿ ಇಲ್ಲದೆ ಪ್ರತಿಕ್ರಿಯಿಸುವುದು ಸರಿಯಲ್ಲ. ಆದರೆ ಸಿಐಡಿ ತಂಡವು ಪಿಎಸ್ಐ ಪರೀಕ್ಷಾ ಅಕ್ರಮ ಕುರಿತು ಈಗಾಗಲೇ ಹಲವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದೆ. ಕಾಂಗ್ರೆಸ್ನ ಇಬ್ಬರು ಕಿಂಗ್ಪಿನ್ಗಳ ಬಂಧನ ಈಗಾಗಲೇ ಆಗಿದ್ದು, ಆ ಪಕ್ಷದವರೇ ಹೆಚ್ಚು ಬಂಧಿಸಲ್ಪಡುತ್ತಿದ್ದಾರೆ. ಇನ್ನೂ ಹಲವರ ಬಂಧನವಾಗಲಿದೆ. ಪಕ್ಷ, ಪಂಗಡ ನೋಡದೆ ತಪ್ಪೆಸಗಿದವರ ಮೇಲೆ ನಿರ್ದಾಕ್ಷೀಣ್ಯ ಕ್ರಮಕ್ಕೆ ಈಗಾಗಲೇ ಸೂಚಿಸಲಾಗಿದೆ ಎಂದರು.
ಸಾರ್ವಜನಿಕ ಸ್ಥಳ ಹಾಗೂ ಧಾರ್ಮಿಕ ಕೇಂದ್ರಗಳಲ್ಲಿ ಧ್ವನಿವರ್ಧಕ ಅಳವಡಿಕೆ ಸಂಬಂಧ ಸರ್ಕಾರ ಬಿಡುಗಡೆಗೊಳಿಸಿರುವ ಮಾರ್ಗಸೂಚಿಯನ್ನು ಎಲ್ಲರು ಪಾಲನೆ ಮಾಡಬೇಕು. ಕಾನೂನು ಉಲ್ಲಂಘಿಸಿದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಅನುಮತಿ ಪಡೆಯದೆ ಧ್ವನಿವರ್ಧಕ ಬಳಕೆ ಮಾಡಿದ್ದಲ್ಲಿ ತತ್ಕ್ಷಣವೇ ತೆರವುಗೊಳಿಸಲಾಗುವುದು ಎಂದು ಎಚ್ಚರಿಸಿದರು.