ನವದೆಹಲಿ, ಮೇ 11 (DaijiworldNews/DB): ತಾಜ್ಮಹಲ್ ನಿರ್ಮಾಣವಾದ ಭೂಮಿ ಜೈಪುರದ ರಾಜ ಜೈ ಸಿಂಗ್ ಅವರಿಗೆ ಸೇರಿದ್ದಾಗಿದ್ದು, ಮೊಘಲ್ ಚಕ್ರವರ್ತಿ ಷಹಜಹಾನ್ ಭೂಸ್ವಾಧೀನ ಮಾಡಿಕೊಂಡು ಅಲ್ಲಿ ತಾಜ್ಮಹಲ್ ನಿರ್ಮಿಸಿದ್ದಾರೆ ಎಂದು ಬಿಜೆಪಿ ಸಂಸದೆ ದಿಯಾ ಕುಮಾರಿ ಹೇಳಿದ್ದಾರೆ.
ಬುಧವಾರ ಮಾತನಾಡಿದ ಅವರು, ಜೈಸಿಂಗ್ ರಾಜರಿಗೆ ಈ ಭೂಮಿ ಸೇರಿದ್ದಾಗಿರುವ ಬಗ್ಗೆ ರಾಜಮನೆತನದ ಬಳಿ ದಾಖಲೆಗಳಿವೆ. ಅಗತ್ಯವಿದ್ದರೆ ಆ ದಾಖಲೆಗಳನ್ನು ಒದಗಿಸುವುದಾಗಿ ಅವರು ಹೇಳಿದ್ದಾರೆ ಎಂದರು.
ಸ್ಮಾರಕ ನಿರ್ಮಾಣಕ್ಕೂ ಮೊದಲು ಅಲ್ಲಿ ಏನಿತ್ತು ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಜನಸಾಮಾನ್ಯರಿಗಿದೆ. ಹೀಗಾಗಿ ತಾಜ್ಮಹಲ್ ಇತಿಹಾಸದ ಬಗ್ಗೆ ತನಿಖೆಯಾಗಬೇಕು ಎಂದವರು ಇದೇ ವೇಳೆ ಒತ್ತಾಯಿಸಿದರು.
ಭೂಸ್ವಾಧೀನದ ವೇಳೆ ಪರಿಹಾರ ಮೊತ್ತ ನೀಡಲಾಗಿದೆ. ಆದರೆ ಎಷ್ಟು ಮೊತ್ತ, ಅದನ್ನು ಸ್ವೀಕರಿಸಲಾಗಿದೆಯೋ ಎಂಬುದು ತಿಳಿದಿಲ್ಲ. ಆ ಸಮಯದಲ್ಲಿ ನ್ಯಾಯಾಂಗ ವ್ಯವಸ್ಥೆ ಇಲ್ಲದ ಕಾರಣ ಯಾವುದೇ ಮನವಿ ನೀಡಲಾಗಿಲ್ಲ ಎಂದರು.
ತಾಜ್ಮಹಲ್ ನಿರ್ಮಾಣಕ್ಕೂ ಮುನ್ನ ಅಲ್ಲಿ ದೇವಸ್ಥಾನವೋ ಅಥವಾ ಬೇರೇನಾದರೂ ಇತ್ತೇ ಎಂಬುದು ಗೊತ್ತಾಗಬೇಕು. ದಾಖಲೆಗಳನ್ನು ಪರಿಶೀಲಿಸಿದರೆ ತಾಜ್ಮಹಲ್ ಹಿಂದಿನ ವಿಷಯಗಳು ಸ್ಪಷ್ಟವಾಗಬಹುದು ಎಂದವರು ಇದೇ ವೇಳೆ ತಿಳಿಸಿದರು.