ನವದೆಹಲಿ, ಮೇ 11 (DaijiworldNews/MS): ಪತಿ ತನ್ನ ಪತ್ನಿಯೊಂದಿಗಿನ ಬಲವಂತದ ಲೈಂಗಿಕತೆಗೆ ವಿನಾಯತಿ ನೀಡುವ ಭಾರತೀಯ ದಂಡ ಸಂಹಿತೆ ಸೆಕ್ಷನ್ 375 ನ್ನು ಪ್ರಶ್ನಿಸಿದ ಅರ್ಜಿಗಳ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಬುಧವಾರ ಭಿನ್ನ ನಿಲುವಿನ ತೀರ್ಪು ನೀಡಿದೆ. ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ರಾಜೀವ್ ಶಕ್ಧರ್ ಮತ್ತು ಸಿ ಹರಿ ಶಂಕರ್ ಅವರು ತಮ್ಮ ತೀರ್ಪಿನಲ್ಲಿ ಭಿನ್ನ ನಿಲುವು ವ್ಯಕ್ತಪಡಿಸಿದ್ದಾರೆ.
ವೈವಾಹಿಕ ಅತ್ಯಾಚಾರ ಸಂವಿಧಾನದ ಉಲ್ಲಂಘನೆ ಎಂದು ನ್ಯಾ. ಶಕ್ದರ್ ಹೇಳಿದರೆ ಐಪಿಸಿಯ 375 ಬಿ ಮತ್ತು 198- ಬಿ ಸೆಕ್ಷನ್ಗಳನ್ನು ನ್ಯಾ. ಹರಿಶಂಕರ್ ಎತ್ತಿಹಿಡಿದರು. ಆದರೆ ನ್ಯಾಯಮೂರ್ತಿ ರಾಜೀವ್ ಶಕ್ಧರ್ ಅವರು ವೈವಾಹಿಕ ಅತ್ಯಾಚಾರ ವಿನಾಯಿತಿಯನ್ನು ರದ್ದುಗೊಳಿಸುವ ಬಗ್ಗೆ ಒಲವು ತೋರಿದ್ದಾರೆ.
ಪತ್ನಿಯ ಸಮ್ಮತಿ ಇಲ್ಲದೆ ಆಕೆಯೊಂದಿಗೆ ಪತಿ ನಡೆಸುವ ಲೈಂಗಿಕ ಕ್ರಿಯೆ ಅತ್ಯಾಚಾರವಾಗುವುದಿಲ್ಲ ಎಂದು ಹೇಳುವ 375 ಬಿ ಸೆಕ್ಷನ್ನ ಸಿಂಧುತ್ವವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು.
ಇಬ್ಬರೂ ನ್ಯಾಯಮೂರ್ತಿಗಳ ತೀರ್ಪು ಭಿನ್ನವಾಗಿರುವುದರಿಂದ 'ವೈವಾಹಿಕ ಅತ್ಯಾಚಾರ' ಪ್ರಕರಣವನ್ನು ಮೂವರು ನ್ಯಾಯಮೂರ್ತಿಗಳ ನ್ಯಾಯಪೀಠಕ್ಕೆ ವರ್ಗಾಯಿಸಲಾಗುತ್ತದೆ. ಪ್ರಕರಣದಲ್ಲಿ ಕಾನೂನಿನ ವಿಚಾರಗಳು ಅಡಗಿರುವುದರಿಂದ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಬಹುದು ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಫೆಬ್ರುವರಿಯಲ್ಲಿ ಅರ್ಜಿಗಳ ವಿಚಾರಣೆಯನ್ನು ಮುಕ್ತಾಯಗೊಳಿಸಿದ್ದ ನ್ಯಾಯಪೀಠವು ತೀರ್ಪು ಕಾಯ್ದಿರಿಸಿತ್ತು.