ನವದೆಹಲಿ, ಮೇ 11 (DaijiworldNews/DB): ಮುಂದಿನ ಎರಡು-ಮೂರು ದಿನಗಳಲ್ಲಿ ಸಂಪುಟ ಪುನಾರಚನೆ ಕುರಿತು ಸ್ಪಷ್ಟ ನಿರ್ಧಾರ ಹೊರ ಬೀಳಲಿದೆ. ವರಿಷ್ಠರಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಸಚಿವ ಸಂಪುಟ ಪುನಾರಚನೆ ಬಗ್ಗೆ ವರಿಷ್ಠರ ಜೊತೆ ವಿಸ್ತ್ರತವಾಗಿ ಚರ್ಚಿಸಲಾಗಿದೆ. ಈ ವಿಷಯದಲ್ಲಿ ಮುಂದಿನ ಮೂರು ದಿನಗಳೊಳಗೆ ತೀರ್ಮಾನಿಸಲಾಗುವುದು ಎಂದು ಅಮಿತ್ ಶಾ ಹೇಳಿದ್ದಾರೆ. ಅಲ್ಲದೆ, ಈ ಕುರಿತು ರಾಷ್ಟ್ರಾಧ್ಯಕ್ಷ ಜೆ.[ಪಿ. ನಡ್ಡಾ ಅವರೊಂದಿಗೂ ಮಾತನಾಡುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಸಂಪುಟ ಪುನಾರಚನೆ ವೇಳೆ ಯಾರನ್ನು ಸಂಪುಟಕ್ಕೆ ಸೇರಿಸಬೇಕು ಎಂಬುದು ವರಿಷ್ಠರಿಗೆ ಬಿಟ್ಟ ವಿಚಾರವಾಗಿದೆ. ಯಾರ ಹೆಸರನ್ನು ಕೂಡಾ ಸೇರ್ಪಡೆ, ತೆಗೆದು ಹಾಕುವ ಬಗ್ಗೆ ನಾನು ಪ್ರಸ್ತಾಪ ಮಾಡಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.