ಚಿಕ್ಕಮಗಳೂರು, ಮೇ 11 (DaijiworldNews/DB): ತಪ್ಪು ಮಾಡದಿದ್ದರೆ ಡಿ.ಕೆ. ಶಿವಕುಮಾರ್ ಭಯಗೊಳ್ಳುವ ಅವಶ್ಯಕತೆ ಇಲ್ಲ. ಅವರನ್ನು ಟಾರ್ಗೆಟ್ ಮಾಡುವ ಪ್ರಮೇಯವೂ ನಮಗೆ ಉದ್ಭವವಾಗುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಸಖರಾಯಪಟ್ಟಣ ಮಹಾಶಕ್ತಿ ಕೇಂದ್ರದ ಪ್ರಮುಖರ ಜೊತೆ ಸಂವಾದದ ಬಳಿಕ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಏನೂ ತಪ್ಪು ಮಾಡದಿದ್ದರೆ ಅವರು ಯಾಕೆ ಭಯಗೊಳ್ಳುತ್ತಾರೆ? ತಪ್ಪು ಮಾಡಿದರೆ ಮಾತ್ರ ಆತಂಕ ಇರಬೇಕಲ್ಲವೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷವನ್ನು ಜನರೇ ಟಾರ್ಗೆಟ್ ಮಾಡುತ್ತಿದ್ದಾರೆ. ಪಂಚರಾಜ್ಯ ಚುನಾವಣೆ ಫಲಿತಾಂಶದಲ್ಲಿ ಇದು ಸ್ಪಷ್ಟವಾಗಿದೆ. ಪಂಜಾಬ್ ಒಂದು ಅವರ ಕೈಲಿತ್ತು, ಅಲ್ಲಿಯೂ ಅವರ ಕನಸು ಧೂಳೀಪಟವಾಗಿದೆ. ಹೀಗಾಗಿ ಡಿ.ಕೆ. ಶಿವಕುಮಾರ್ ಅವರನ್ನು ಟಾರ್ಗೆಟ್ ಮಾಡುವ ಅವಶ್ಯಕತೆ ನಮಗೆ ಬರುವುದಿಲ್ಲ ಎಂದು ವ್ಯಂಗ್ಯವಾಡಿದರು.
ಡಿಕೆಶಿಯವರ ಸಾಮರ್ಥ್ಯದ ಬಗ್ಗೆ ನಾನೇನೂ ಪ್ರತಿಕ್ರಿಯಿಸುವುದಿಲ್ಲ. ಆದರೆ ಅವರು ಕನಕಪುರ ಬಿಟ್ಟರೆ ಬೇರೆಲ್ಲೂ ರಾಜಕೀಯವಾಗಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿಲೊಲ. ತಪ್ಪು ಮಾಡದೇ ಜೈಲಿಗೆ ಹೋಗುವವರಿಗೆ ಸಾಮರ್ಥ್ಯ ಸಾಬೀತು ಮಾಡುವುದೊಂದು ಶಕ್ತಿ. ಆದರೆ ತಪ್ಪು ಮಾಡಿದವರಾದರೆ ಅಲ್ಲಿಗೇ ರಾಜಕೀಯ ಜೀವನ ಅಂತ್ಯವಾಗುತ್ತದೆ ಎಂದರು.