ಜಮ್ಮು, ಮೇ 11 (DaijiworldNews/MS): ಭಾರತವೂ ನೆರೆ ರಾಷ್ಟ್ರದ ಹಾದಿಯಲ್ಲಿದ್ದು, ಶ್ರೀಲಂಕಾದ ಪರಿಸ್ಥಿತಿ ಭಾರತಕ್ಕೆ ಎಚ್ಚರಿಕೆಯ ಗಂಟೆಯಾಗಿದ್ದು, ಮುನ್ನೆಚ್ಚರಿಕೆಯೊಂದಿಗೆ ಕೆಲಸ ಮಾಡಬೇಕು ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ.
ಬುಧವಾರ ಬೆಳಿಗ್ಗೆ ಟ್ವೀಟ್ ಮಾಡಿದ ಅವರು, ಶ್ರೀಲಂಕಾದ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟು ಭಾರತಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿದೆ. 2014ರಿಂದ ಭಾರತವನ್ನು ಕೋಮು ಉನ್ಮಾದಕ್ಕೆ ತಳ್ಳಲಾಗುತ್ತಿದೆ ಮತ್ತು ಕಲ್ಪಿತ ಭಯಕ್ಕೆ ತಳ್ಳಲಾಗುತ್ತಿದೆ. ರಾಷ್ಟ್ರೀಯತೆ ಮತ್ತು ಧಾರ್ಮಿಕ ಬಹುಮತಕ್ಕೆ, ಸಾಮಾಜಿಕ ಒಗ್ಗಟ್ಟಿಗೆ ಅಡ್ಡಿ ಪಡಿಸಲಾಗುತ್ತಿದೆ. ಆರ್ಥಿಕ ಭದ್ರತೆಗೂ ಅಪಾಯವಿದೆ ಎಂದು ಆತಂಕ ವ್ಯಕ್ತ ಪಡಿಸಿದ್ದಾರೆ.
ಶ್ರೀಲಂಕಾ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟು ಬಗ್ಗೆ ದೇಶದ ಸರ್ಕಾರದ ವಿರುದ್ಧದ ಪ್ರತಿಭಟನೆಗಳು ಮುಂದುವರಿದಿರುವುದರಿಂದ ಶ್ರೀಲಂಕಾದಲ್ಲಿ ನಾಗರಿಕ ಅಶಾಂತಿಯು ಕಳೆದ ಕೆಲವು ದಿನಗಳಿಂದ ಅಭೂತಪೂರ್ವ ಮಟ್ಟಕ್ಕೆ ಏರಿದೆ. ಪ್ರತಿಭಟನೆಗಳಿಂದ ಹೈರಾಣಾಗಿರುವ ಶ್ರೀಲಂಕಾ ಹೆಜ್ಜೆ ಹೆಜ್ಜೆಗೂ ಹಿನ್ನಡೆ ಅನುಭವಿಸುತ್ತಿದೆ. ಸರ್ಕಾರದ ವಿರುದ್ದ ಜನರ ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಇದರ ಬೆನ್ನಲ್ಲೇ ಶ್ರೀಲಂಕಾ ಪ್ರಧಾನಿ ಮಹೀಂದ ರಾಜಪಕ್ಸೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.