ಬೆಂಗಳೂರು, ಮೇ 11 (DaijiworldNews/MS): ರೂಪಾಯಿ ಮೌಲ್ಯ ಕುಸಿತದ ಕುರಿತಂತೆ ಬಿಜೆಪಿ ಆಡಳಿತದ ವಿರುದ್ದ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ದಿನೇಶ್ ಗುಂಡುರಾವ್, "ಕಟೀಲ್ರವರೇ ದೇಶವನ್ನು ಗತಿಗೆಟ್ಟ ಸ್ಥಿತಿಗೆ ತಂದ ಮೋದಿಯವರ ಆಡಳಿತ ಎಷ್ಟು ಅದ್ಭುತವಲ್ಲವೆ? " ಎಂದು ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿ , ಕೇಂದ್ರ ಸರ್ಕಾರವನ್ನು ತರಾಟೆಗೆತ್ತಿಕೊಂಡಿದ್ದು, ಸ್ವಘೋಷಿತ ವಿಶ್ವಗುರು ಮೋದಿ ಭಾರತವನ್ನು ಇನ್ನೊಂದು ಶ್ರೀಲಂಕಾ ಮಾಡುವುದರಲ್ಲಿ ಅನುಮಾನವೇ ಇಲ್ಲ ಎಂದು ಕಿಡಿಕಾರಿದ್ದಾರೆ.
ಡಾಲರ್ ಎದುರು ರೂಪಾಯಿ ಸಾರ್ವಕಾಲಿಕ ಕುಸಿತ ದಾಖಲಿಸಿದೆ.ಕೇಂದ್ರ ಸರ್ಕಾರದ ಕಳಪೆ ಆರ್ಥಿಕ ನಿರ್ವಹಣೆಯಿಂದಾದ ಹಣದುಬ್ಬರ ಹಾಗೂ ವಿದೇಶಿ ಹೂಡಿಕೆದಾರರು ಹೂಡಿಕೆ ಹಿಂಪಡೆಯುತ್ತಿರುವುದು ರೂಪಾಯಿ ಮೌಲ್ಯದ ಕುಸಿತಕ್ಕೆ ಕಾರಣ. ಸ್ವಘೋಷಿತ ವಿಶ್ವಗುರು ಮೋದಿ ಭಾರತವನ್ನು ಇನ್ನೊಂದು ಶ್ರೀಲಂಕಾ ಮಾಡುವುದರಲ್ಲಿ ಅನುಮಾನವೇ ಇಲ್ಲ ಎಂದು ಹೇಳಿದ್ದಾರೆ
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ , ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದರೆ 15 ₹ಗೆ 1 ಡಾಲರ್ ಕೊಡುವ ಕಾಲ ಬರುತ್ತದೆ ಎಂದಿದ್ದರು.ಮೋದಿ ಅಧಿಕಾರಕ್ಕೆ ಬಂದು 8 ವರ್ಷವಾಯಿತು. 15 ₹ಗೆ 1ಡಾಲರ್ ಆಗುವುದಿರಲಿ ಈಗ 77 ₹ಗೂ 1 ಡಾಲರ್ ಸಿಗದಂತಾಗಿದೆ. ಕಟೀಲ್ರವರೆ ದೇಶವನ್ನು ಗತಿಗೆಟ್ಟ ಸ್ಥಿತಿಗೆ ತಂದ ಮೋದಿಯವರ ಆಡಳಿತ ಎಷ್ಟು ಅದ್ಭುತವಲ್ಲವೆ? ಎಂದು ಕುಹಕವಾಡಿದ್ದಾರೆ.
t