ನವದೆಹಲಿ, ಮೇ 11 (DaijiworldNews/DB): ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಕಾಲ ಸನ್ನಿಹಿತವಾಗಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಅವರು ವರಿಷ್ಠರ ಭೇಟಿಗಾಗಿ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ.
ಮಂಗಳವಾರವೇ ವರಿಷ್ಠರ ಭೇಟಿಗಾಗಿ ದೆಹಲಿಯಲ್ಲಿದ್ದರೂ, ಸಿಗದ ಕಾರಣ ಬುಧವಾರ ಮತ್ತೆ ವರಿಷ್ಠರ ಭೇಟಿಗಾಗಿ ಕಾದು ಕುಳಿತಿದ್ದಾರೆ. ಈಗಾಗಲೇ ಬೊಮ್ಮಾಯಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿದ್ದು, ಮಧ್ಯಾಹ್ನ 12.30ಕ್ಕೆ ಅಮಿತ್ ಶಾ ಅವರ ಭೇಟಿಗೆ ಸಮಯ ನಿಗದಿಯಾಗಿದೆ. ರಾಜನಾಥ್ ಸಿಂಗ್ ಭೇಟಿ ವೇಳೆ ರಾಜ್ಯ ರಾಜಕೀಯ ವಿದ್ಯಾಮಾನಗಳ ಕುರಿತು ಚರ್ಚಿಸಿದ್ದಾರೆ.
ಅಮಿತ್ ಶಾ ಭೇಟಿ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನೂ ಕೂಡಾ ಸಿಎಂ ಬೊಮ್ಮಾಯಿ ಭೇಟಿಯಾಗಲಿದ್ದಾರೆ ಎನ್ನಲಾಗಿದೆ. ವರಿಷ್ಠರ ಭೇಟಿ ಬಳಿಕ ಸಚಿವ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ದೊರೆತಲ್ಲಿ ಶೀಘ್ರ ವಿಸ್ತರಣೆ ನಡೆಯಲಿದೆ. ಕೆಲವೊಂದು ವರದಿಗಳ ಪ್ರಕಾರ ಮೇ 16ರಂದು ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎನ್ನಲಾಗುತ್ತಿದೆ.