ಶಿವಮೊಗ್ಗ, ಮೇ 10 (DaijiworldNews/DB): ಶುದ್ದ ಪರಿಸರ ಬದಲಾಗಿ ಕೆಸರಿನಲ್ಲೇ ಕಮಲ ಬೆಳೆಯುತ್ತದೆ. ಬಿಜೆಪಿಯವರು ಕೂಡಾ ಸಮಾಜದ ಸ್ವಾಸ್ಥ್ಯ ಹಾಳುಗೆಡವಿ ಅವ್ಯವಸ್ಥೆ ಸೃಷ್ಟಿ ಮೂಲಕ ಅಧಿಕಾರಕ್ಕೇರುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಡೆದ ಜನಧ್ವನಿ ಸಮಾವೇಶದಲ್ಲಿ ಮಾತಾನಾಡಿದ ಅವರು, ರಾಜ್ಯವನ್ನು ಭ್ರಷ್ಟ ರಾಜ್ಯ ಎಂಬುದಾಗಿ ಸ್ಟ್ಯಾಂಪ್ ಹಾಕುವ ಕೆಲಸವನ್ನು ಬಿಜೆಪಿ ಮಾಡಿದೆ. ಆ ಕಳಂಕ ತೆಗೆದು ಶುದ್ದ ಆಡಳಿತ ನೀಡುವ ಕೆಲಸ ಆಗಬೇಕು. ಸ್ವಚ್ಛ ರಾಜಕೀಯವನ್ನೇ ಮಾಡಿಕೊಂಡು ಬಂದಿರುವ ಕಾಂಗ್ರೆಸ್ ಈ ಬಾರಿ ಅಧಿಕಾರಕ್ಕೇರಿದರೆ ಅಂತಹ ಕಳಂಕ ನೀಗಲು ಸಾಧ್ಯ ಎಂದರು.
ಸಂತೋಷ್ ಪಾಟೀಲ್ ಸಾವನ್ನಪ್ಪಿದಾಗ ಕಾನೂನು ಪ್ರಕಾರ ಪ್ರಕರಣ ದಾಖಲಿಸಲು ನಾವು ಒತ್ತಾಯ ಮಾಡಿದರೆ ಸಿಎಂ ಮತ್ತು ಗೃಹ ಸಚಿವರು ಈಶ್ವರಪ್ಪರನ್ನು ರಕ್ಷಿಸುವ ಕೆಲಸ ಮಾಡಿದರು. ಟೋಪಿ ಹಾಕುವ ಕೆಲಸವನ್ನೇ ಬಿಜೆಪಿಗರು ಇತ್ತೀಚೆಗೆ ಮಾಡುತ್ತಿದ್ದಾರೆ. ಇಡೀ ರಾಜ್ಯವನ್ನು ಕಲ್ಮಶ ಮಾಡಿದ್ದಾರೆ ಎಂದವರು ಆಪಾದಿಸಿದರು.
ಪಿಎಸ್ಐ ಹಗರಣ ತನಿಖೆ ಮುನ್ನವೇ ಮರು ಪರೀಕ್ಷೆ ಘೋಷಣೆ ಮಾಡಿದ್ದಾರೆ. ಸತ್ಯ ಹೊರಬರುವ ಮುನ್ನ ಪರೀಕ್ಷೆ ನಡೆಸುವುದು ಎಂದರೆ ಏನರ್ಥ ಎಂದು ಪ್ರಶ್ನಿಸಿದ ಅವರು, ಬಿಜೆಪಿ ರಾಜ್ಯಕ್ಕೆ ಕಪ್ಪುಚುಕ್ಕೆಯಾಗಿದೆ. ಅದನ್ನು ಕಿತ್ತೊಗೆಯುವ ಅಗತ್ಯ ತುಂಬಾ ಇದೆ. ಹಾಗಾಗಬೇಕಾದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನ ಪಡೆದು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದವರು ತಿಳಿಸಿದರು.