ಧಾರವಾಡ, , ಮೇ 10 (DaijiworldNews/DB): ಪಿಎಸ್ಐ ಪರೀಕ್ಷಾ ಅಕ್ರಮ ಇಷ್ಟೊಂದು ದೊಡ್ಡ ಮಟ್ಟದಲ್ಲಿ ನಡೆದಿರುವುದನ್ನು ನೋಡಿದರೆ ಗೃಹ ಇಲಾಖೆಯು ಸಚಿವರ ಹತೋಟೆಯಲ್ಲೇ ಇಲ್ಲ ಎನ್ನುವುದು ಖಾತರಿಯಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಪಿಎಸ್ಐ ನೇಮಕಾತಿ ಗೃಹ ಸಚಿವರ ಜವಾಬ್ದಾರಿಯಾಗಿದೆ. ಆದರೆ ದಿನೇ ದಿನೇ ಭ್ರಷ್ಟಾಚಾರದ ವ್ಯಾಪಕತೆ ವಿಸ್ತರಿಸುತ್ತಿರುವುದನ್ನು ನೋಡಿದರೆ ಆ ಇಲಾಖೆಯೇ ಅವರ ಹತೋಟಿಯಲ್ಲಿ ಇಲ್ಲ ಎಂಬುದು ಗೊತ್ತಾಗುತ್ತದೆ. ಹಗರಣದಲ್ಲಿ ಆರೋಪ ಕೇಳಿ ಬಂದ ಸಚಿವರುಗಳು ರಾಜೀನಾಮೆ ನೀಡಿಲ್ಲ. ಆರೋಪ ಹೊತ್ತಿರುವ ಉನ್ನತ ಪೊಲೀಸ್ ಅಧಿಕಾರಿಗಳೂ ಅಮಾನತಾಗಿಲ್ಲ. ನೈತಿಕ ಮತ್ತು ಭೌತಿಕ ಜವಾಬ್ದಾರಿಗಳಿಂದ ನುಣುಚಿಕೊಂಡು ಜನರ ಕಣ್ಣಿಗೆ ಮಣ್ಣೆರಚುವ ಕೆಲಸವನ್ನು ಇವರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ಪಿಎಸ್ಐ ನೇಮಕಾತಿ ನಡೆದಿದೆ. ಆದರೆ ಆಗ ಒಂದೇ ಒಂದು ಅಕ್ರಮ ಉಂಟಾಗಿಲ್ಲ. ಆದರೆ ಈಗ ಅಕ್ರಮದ ಸ್ವರೂಪ ದೊಡ್ಡದಾಗಿದೆ. ಪಾರದರ್ಶಕ ಆಡಳಿತವನ್ನು ಬಿಜೆಪಿ ನೀಡುತ್ತಿಲ್ಲ. ಅವರು ಮಾಡಿದ್ದೇ ಕಾನೂನು ಎಂಬಂತಾಗಿದೆ ಎಂದು ಬಿಜೆಪಿ ವಿರುದ್ದ ಅವರು ವಾಗ್ದಾಳಿ ನಡೆಸಿದರು.
ನಮಗೆ ವರಿಷ್ಠರ ಹತೋಟಿ ಇದೆ. ಅವರ ಅನುಮತಿ ಇಲ್ಲದೆ ಯಾವುದೇ ಕೆಲಸ ನಡೆಯುವುದಿಲ್ಲ. ಹೀಗಾಗಿ ಪಾರದರ್ಶಕ ಆಡಳಿತವನ್ನು ಕಾಂಗ್ರೆಸ್ ಜನತೆಗೆ ನೀಡಿದೆ. ಆದರೆ ಬಿಜೆಪಿಗರಿಗೆ ಕೇಂದ್ರದ ಹತೋಟಿಯೇ ಇಲ್ಲದ ಕಾರಣ ಹೀಗಾಗಿದೆ ಎಂದ ಅವರು, ಜನ ವಿಶ್ವಾಸದ ಮೂಲಕ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರ ಪಡೆಯುವುದು ಖಚಿತ ಎಂದರು.
ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಯಾವುದೇ ಗಲಾಟೆ, ವೈಮನಸ್ಸು ಇಲ್ಲ. ಅವರ ಜವಾಬ್ದಾರಿಯಂತೆ ಇಬ್ಬರೂ ಮುನ್ನಡೆಯುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ವೀರಪ್ಪ ಮೊಯ್ಲಿ ಪ್ರತಿಕ್ರಿಯಿಸಿದರು.