ಬೆಂಗಳೂರು, ಮೇ 10 (DaijiworldNews/DB): ನಾನು ಮತ್ತು ಸಚಿವ ಅಶ್ವತ್ಥ ನಾರಾಯಣ ಇತ್ತೀಚೆಗೆ ಭೇಟಿಯಾಗಿಲ್ಲ ಎಂದು ರಾಜ್ಯ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಅಶ್ವತ್ಥ ನಾರಾಯಣ ಅವರ ಮಗಳು ಮತ್ತು ನನ್ನ ಮಗ ಸ್ನೇಹಿತರು. ಹಾಗಾಗಿ ಸ್ವಾಭಾವಿಕವಾಗಿ ಒಮ್ಮೊಮ್ಮೆ ಭೇಟಿಯಾಗಿದ್ದೇವೆ. ಭೇಟಿಯಾಗುವುದೂ ತಪ್ಪಲ್ಲ. ಆದರೆ ಇತ್ತೀಚೆಗೆ ನಾವಿಬ್ಬರೂ ಭೇಟಿಯಾಗಿಲ್ಲ ಎಂದರು.
ಸೋಮವಾರ ಕಾರ್ಯಕ್ರಮವೊಂದಕ್ಕೆ ನನ್ನನ್ನು ಆಹ್ವಾನಿಸಿದ್ದರು. ಆದರೆ ನಾನು ಹೋಗಿರಲಿಲ್ಲ ಎಂದವರು ತಿಳಿಸಿದರು.
ಉದಯಪುರದಲ್ಲಿ ಮೇ 13ರಿಂದ ಮೂರು ದಿನಗಳ ಕಾಲ ಎಐಸಿಸಿ ಚಿಂತನ ಮಂಥನ ಶಿಬಿರ ನಡೆಯಲಿದ್ದು, ಈ ವೇಳೆ ಸುರ್ಜೇವಾಲರನ್ನು ಭೇಟಿಯಾಗಿ ಚುನಾವಣಾ ತಯಾರಿ ವಿಚಾರವಾಗಿ ನಾನು ಮಾಡಿರುವ ಆಕ್ಷನ್ ಪ್ಲಾನ್ನ್ನು ಅವರಿಗೆ ವಿವರಿಸಲಾಗುವುದು. ಬಳಿಕ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ ರೂಪುರೇಷೆ ಸಿದ್ದಪಡಿಸಲಾಗುವುದು ಎಂದು ಚುನಾವಣಾ ತಯಾರಿ ಕುರಿತು ಪ್ರತಿಕ್ರಿಯಿಸಿದರು.
ಕಾಂಗ್ರೆಸ್ ಭ್ರಷ್ಟಾಚಾರ ಎಸಗಿದೆ ಎಂದಾದರೆ ನಮ್ಮ ಅಧಿಕಾರಾವಧಿಯಲ್ಲಿ ಬಿಜೆಪಿಯವರು ಆರೋಪಿಸಬಹುದಿತ್ತು. ಆದರೆ ಯಾಕೆ ಸುಮ್ಮನಿದ್ದರು? ಯಾವುದೇ ತನಿಖೆಯನ್ನು ಯಾಕೆ ಮಾಡಿಲ್ಲ ಎಂದು ಇದೇ ವೇಳೆ ಪ್ರಶ್ನಿಸಿದರು.
ಪಿಎಸ್ ಐ ನೇಮಕಾತಿ ಹಗರಣ ವಿಚಾರದಲ್ಲಿ ಸಚಿವ ಅಶ್ವತ್ಥ ನಾರಾಯಣ ಅವರ ಸಹೋದರನ ಮೇಲೆ ಆರೋಪ ಬಂದಿದೆ. ಆದರೆ ಅಶ್ವತ್ಥ ನಾರಾಯಣ ಅವರು ಸಚಿವರಾಗಿರುವುದರಿಂದ ತನಿಖೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಮೊದಲು ಅವರು ರಾಜೀನಾಮೆ ನೀಡಬೇಕು ಎಂದು ಇದೇ ವೇಳೆ ಅವರು ಒತ್ತಾಯಿಸಿದರು.