ದಹೋದ್, ಮೇ 10 (DaijiworldNews/DB): ಪ್ರಧಾನಿ ನರೇಂದ್ರ ಮೋದಿಯವರು ಬಡವರಿಗೊಂದು, ಶ್ರೀಮಂತರಿಗೊಂದು ಸೇರಿ ಎರಡು ಭಾರತಗಳನ್ನು ಸೃಷ್ಟಿ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ದಹೋದ್ ಜಿಲ್ಲೆಯಲ್ಲಿ 'ಆದಿವಾಸಿ ಸತ್ಯಾಗ್ರಹ ರ್ಯಾಲಿ' ಮೂಲಕ ವರ್ಷಾಂತ್ಯ ನಡೆಯುವ ಗುಜರಾತ್ ವಿಧಾನಸಭೆ ಚುನಾವಣಾ ಪ್ರಚಾರಕ್ಕೆ ಮಂಗಳವಾರ ಚಾಲನೆ ನೀಡಿದ ಅವರು, ದೇಶದ ಸಂಪನ್ಮೂಲಗಳನ್ನು ಕೆಲವು ಶ್ರೀಮಂತರಿಗೆ ಮಾತ್ರ ಮೋದಿ ಹಂಚುತ್ತಿದ್ದಾರೆ. ಬಡವರಿಗೊಂದು, ಶ್ರೀಮಂತರಿಗೊಂದು ಭಾರತ ಸದ್ಯ ಸೃಷ್ಟಿಯಾಗಿದೆ. ಶ್ರೀಮಂತರಿಗಾಗಿ ಇರುವ ಭಾರತದಲ್ಲಿ ಬಿಲಿಯನೇರ್, ಅಧಿಕಾರಶಾಹಿಗಳಿಗಾಗಿಯೇ ಅವಕಾಶ ಕಲ್ಪಿಸಲಾಗಿದೆ. ಆದರೆ ಸಾಮಾನ್ಯ ಜನರಿಗೆ ಬಡ ಭಾರತವೇ ಗತಿಯಾಗಿದೆ ಎಂದು ಮೋದಿ ವಿರುದ್ದ ವಾಗ್ದಾಳಿ ನಡೆಸಿದರು.
ಗುಜರಾತ್ನಲ್ಲಿ ಮಾಡಿದ ಕೆಲಸವನ್ನು ದೇಶಕ್ಕೆ ಅನ್ವಯಿಸಿ ಗುಜರಾತ್ ಮಾದರಿ ಎಂದು ಕರೆಯುತ್ತಿದ್ದಾರೆ. ಆದಿವಾಸಿಗಳು, ಬಡವರ್ಗದವರಿಗೆ ಸೇರಿದ ಅರಣ್ಯ, ನೀರು, ಇತರ ಸಂಪನ್ಮೂಲಗಳನ್ನು ಅವರಿಂದ ಕಿತ್ತುಕೊಂಡು ಶ್ರೀಮಂತ ವರ್ಗದವರಿಗೆ ನೀಡುತ್ತಿದ್ದಾರೆ ಎಂದವರು ಆಪಾದಿಸಿದರು.