ಬೆಂಗಳೂರು, ಮೇ 10 (DaijiworldNews/HR): ಜಾತಿಗಳ ನಡುವೆ ಭಯ ಬಿತ್ತಿ ಅಶಾಂತಿ ಸೃಷ್ಟಿಸುವವರನ್ನು ಭಯೋತ್ಪಾದಕರು ಎನ್ನದೆ ಬೇರೇನೆಂದು ಕರೆಯಲು ಸಾಧ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿಕೆ ಕುರಿತಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಶಾಂತಿ ವಾತಾವರಣ ಸೃಷ್ಟಿಸುವ ಯಾರೇ ಆದರೂ ಅವರು ಭಯೋತ್ಪಾದಕರು. ಅವರನ್ನು ಭಯೋತ್ಪಾದಕರು ಎಂದು ಕರೆಯಲಾಗುವುದು. ಬಿ.ಕೆ.ಹರಿಪ್ರಸಾದ್ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ ದಾರಿ ತಪ್ಪಿಸಬಾರದು ಎಂದರು.
ಇನ್ನು ಶಾಂತಿ ಸುವ್ಯವಸ್ಥೆ ಪಾಲನೆ ಸರ್ಕಾರದ ಕರ್ತವ್ಯವಾಗಿದೆ. ಆದರೆ ಆಜಾನ್ ಮತ್ತು ಹನುಮಾನ್ ಚಾಲಿಸ ಪಠಣಗಳ ನಡುವೆ ಪೈಪೋಟಿ ಸೃಷ್ಟಿಯಾಗಿರುವುದಕ್ಕೆ ಸರ್ಕಾರವೇ ಕಾರಣ. ಒಂದೆಡೆ ಕುಮ್ಮಕ್ಕು ನೀಡುವುದು, ಮತ್ತೊಂದು ಕಡೆ ಚಿವುಟುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.