ನವದೆಹಲಿ, ಮೇ 10 (DaijiworldNews/MS): ಭಾರತದ ಖ್ಯಾತ ಸಂಗೀತ ಮಾಂತ್ರಿಕ, ಸಂತೂರ್ ವಾದಕ 84 ವರ್ಷದ ಪಂಡಿತ್ ಶಿವಕುಮಾರ್ ಶರ್ಮಾ ಅವರು ಇಂದು ಮುಂಬೈನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಶರ್ಮಾ ಕಳೆದ ಆರು ತಿಂಗಳಿನಿಂದ ಮೂತ್ರಪಿಂಡಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿದ್ದರು ಮತ್ತು ಡಯಾಲಿಸಿಸ್ ಗೆ ಒಳಗಾಗಿದ್ದರು. ಇಂದು ಹೃದಯಾಘಾತಕ್ಕೆ ಒಳಗಾಗಿ, ನಿಧನರಾಗಿದ್ದಾರೆ.
ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರು ಸಹ ಪ್ರತಿಕ್ರಿಯಿಸಿದ್ದು, ಅವರ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಪಂಡಿತ್ ಶಿವಕುಮಾರ್ ಶರ್ಮ ಅವರ ಅಗಲಿಕೆ ಸಾಂಸ್ಕೃತಿಕ ಲೋಕಕ್ಕೆ ತುಂಬಲಾಗ ನಷ್ಟ. ಅವರ ಸಾವಿನ ನೋವು ಬರಿಸುವ ಶಕ್ತಿಯನ್ನು ಕುಟುಂಬಕ್ಕೆ ಮತ್ತು ಕಲಾರಂಗಕ್ಕೆ ಕಲ್ಪಿಸಲಿ ಎಂದು ಪ್ರಧಾನಿ ಪ್ರಾರ್ಥಿಸಿದ್ದಾರೆ.
ಪದ್ಮ ವಿಭೂಷಣ ಪ್ರಶಸ್ತಿ ವಿಜೇತ ಶರ್ಮಾ ಅವರು ಜಮ್ಮುವಿನಲ್ಲಿ 1938ರಲ್ಲಿ ಜನಿಸಿದ್ದರು. ಜಮ್ಮು-ಕಾಶ್ಮೀರದ ಜಾನಪದ ವಾದ್ಯವಾದ ಸಂತೂರ್ ನಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ನುಡಿಸಿದ ಪ್ರಥಮ ಭಾರತೀಯ ಸಂಗೀತಗಾರ ಎಂಬ ಖ್ಯಾತಿ ಶರ್ಮಾ ಅವರದ್ದಾಗಿದೆ.