ತಿರುಪತಿ, ಮೇ 10 (DaijiworldNews/MS): ಆಘಾತಕಾರಿ ಘಟನೆಯೊಂದರಲ್ಲಿ ಇಂಟರ್ ಮೀಡಿಯೇಟ್ ವಿದ್ಯಾರ್ಥಿಯೊಬ್ಬ ಮಂಗಳವಾರ ಪರೀಕ್ಷೆಗೂ ಮುನ್ನ ತೀವ್ರ ಹೃದಯಾಘಾತಕ್ಕೊಳಗಾದ ಘಟನೆ ತಿರುಪತಿ ಜಿಲ್ಲೆಯಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಸ್ಯಾದಪುರಂ ಮಂಡಲದ ಯೆಕೊಲ್ಲು ವೆಂಕಟ ಸತೀಶ್ (17)ಎಂದು ಗುರುತಿಸಲಾಗಿದೆ.
ವೆಂಕಟ ಸತೀಶ್ ಗುದುರ್ ಪಟ್ಟಣದ ಶ್ರೀ ಸ್ವರ್ಣಂಧರ ಭಾರತಿ ಜ್ಯೂನಿಯರ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಇಂಟರ್ ಮಿಡಿಯೇಟ್ ನ ಇಂಗ್ಲೀಷ್ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರದಲ್ಲೇ ಬಂದಿದ್ದ. ಪರೀಕ್ಷಾ ಕೊಠಡಿಗೆ ತೆರಳುವ ಮುನ್ನತಪಾಸಣೆ ನಡೆಸುತ್ತಿದ್ದಾಗ ಎದೆಯಲ್ಲಿ ಸ್ವಲ್ಪ ನೋವಾಗುತ್ತಿರುವುದಾಗಿ ತಿಳಿಸಿದ್ದಾನೆ.
ಆ ಬಳಿಕ ವಿದ್ಯಾರ್ಥಿ ಸತೀಶ್ ಪರೀಕ್ಷೆಗೆ ಕುಳಿತುಕೊಳ್ಳಲು ತೀವ್ರ ಹೃದಯಾಘಾತಕ್ಕೆ ಒಳಗಾಗಿ ಕುಸಿದುಬಿದ್ದಿದ್ದಾನೆ. ಕೆಲ ನಿಮಿಷಗಳ ಬಳಿಕ ತೀವ್ರ ಉಸಿರಾಟದ ತೊಂದರೆಯಾಗಿದೆ. ಕೂಡಲೇ ಪೊಲೀಸರು ಚಿಕಿತ್ಸೆಗಾಗಿ ಆತನನ್ನು ಸ್ಥಳೀಯ ಆಸ್ಪತ್ರೆಗೆ ಸ್ಥಳಾಂತರಿಸಿದ್ದು ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಗುದುರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.