ಬೆಂಗಳೂರು, ಮೇ 10 (DaijiworldNews/DB): ತಮ್ಮ ಇಲಾಖೆ ಹಗರಣ ಕುರಿತು ಯಾರೂ ಧ್ವನಿ ಎತ್ತಬಾರದು ಎಂಬ ಕಾರಣಕ್ಕೆ ಮತ್ತು ತಮ್ಮನ್ನು ರಕ್ಷಣೆ ಮಾಡಿಕೊಳ್ಳುವ ಉದ್ದೇಶದಿಂದ ಎಂ.ಬಿ. ಪಾಟೀಲ್ ಅವರನ್ನು ಭೇಟಿಯಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.
ಪಿಎಸ್ಐ ನೇಮಕಾತಿ ಹಗರಣದಲ್ಲಿ ಸಹೋದರ ಭಾಗಿ ಆರೋಪ ಕೇಳಿ ಬಂದಿದ್ದ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ ಅವರು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಅವರನ್ನು ಭೇಟಿಯಾದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಹಗರಣಗಳ ವಿರುದ್ದ ಮಾತನಾಡಬಾರದು ಎನ್ನುವ ಕಾರಣಕ್ಕಾಗಿಯೇ ಅವರು ಭೇಟಿ ಮಾಡಿದ್ದಾರೆ. ಆದರೆ ಇದು ಖಾಸಗಿ ಭೇಟಿ, ಶಿಕ್ಷಣ ಸಂಸ್ಥೆಗಳನ್ನು ನಾವಿಬ್ಬರು ಹೊಂದಿದ್ದು, ಪರಸ್ಪರ ಸಲಹೆ ಪಡೆಯುವ ಸಲುವಾಗಿ ಪಾಟೀಲರನ್ನು ಭೇಟಿಯಾಗಿದ್ದೆ ಎಂಬ ಸಿದ್ದ ಉತ್ತರ ಅಶ್ವತ್ಥ ನಾರಾಯಣ ಅವರ ಕಡೆಯಿಂದ ಬರಬಹುದು ಎಂದರು.
ಧ್ವನಿವರ್ಧಕಗಳಲ್ಲಿ ಹನುಮ ಚಾಲೀಸಾ ವಿಚಾರವಾಗಿ ಬಿ.ಕೆ. ಹರಿಪ್ರಸಾದ್ ನೀಡಿರುವ ಹೇಳಿಕೆ ಕುರಿತಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹರಿಪ್ರಸಾದ್ ಹಿರಿಯರು. ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರ ಹೇಳಿಕೆಗಳನ್ನು ತಿರುಚಿ ಪ್ರಸಾರ ಮಾಡಬಾರದು. ಭಯೋತ್ಪಾದಕರೆಂದರೆ ಧರ್ಮಗಳ ನಡುವೆ ದ್ವೇಷ ಹರಡಿಸುವವರು ಎಂಬರ್ಥದಲ್ಲಿ ಅವರು ಮಾತನಾಡಿದ್ದಾರೆಯೇ ಹೊರತು ಅದಕ್ಕೆ ವಿಶೇಷ ಅರ್ಥ ಕಲ್ಪಿಸುವ ಕೆಲಸ ಅಗತ್ಯವಿಲ್ಲ ಎಂದು ತಿಳಿಸಿದರು.
ಕೆಪಿಎಸ್ ಸಿ ಮಾತ್ರವಲ್ಲದೇ ಪಿಡಬ್ಲ್ಯೂಡಿ, ಶಿಕ್ಷಣ, ಪೊಲೀಸ್ ಇಲಾಖೆ, ಬಮೂಲ್, ಸಹಕಾರ ಸಂಘಗಳಲ್ಲಿಯೂ ಅವ್ಯವಹಾರಗಳು ನಡೆಯುತ್ತಿರುವ ಬಗ್ಗೆ ಮಾಹಿತಿಗಳು ಬರುತ್ತಿವೆ. ಈಗಾಗಲೇ ಯಾವ್ಯಾವ ಇಲಾಖೆಗಳಲ್ಲಿ ಸರ್ಕಾರಿ ಹುದ್ದೆಗೆ ಎಷ್ಟು ಹಣ ನೀಡಬೇಕೆಂಬ ಪಟ್ಟಿ ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಸರ್ಕಾರ ಇಂತಹವುಗಳಿಗೆ ನೊಟೀಸ್ ನೀಡುವ ತಾಕತ್ತು ಹೊಂದಿದೆಯೇ ಎಂದವರು ಪ್ರಶ್ನಿಸಿದರು.