ನವದೆಹಲಿ, ಮೇ 10 (DaijiworldNews/HR): 12 ರಿಂದ14 ವರ್ಷ ವಯಸ್ಸಿನ ಮೂರು ಕೋಟಿಗೂ ಹೆಚ್ಚು ಮಕ್ಕಳಿಗೆ ಕೊರೊನಾ ಲಸಿಕೆಯ ಮೊದಲ ಡೋಸ್ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಮಾರ್ಚ್ 16 ರಿಂದ 12-14 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಲು ಆರಂಭಿಸಲಾಗಿದ್ದು, 3 ಕೋಟಿಗೂ ಹೆಚ್ಚು 12-14 ವರ್ಷದೊಳಗಿನ ಯುವಕರು 1 ನೇ ಡೋಸ್ ಕೊರೊನಾ ಲಸಿಕೆಯನ್ನು ಸ್ವೀಕರಿಸಿದ್ದು, ಲಸಿಕೆ ಹಾಕಿಸಿಕೊಂಡ ನನ್ನ ಎಲ್ಲಾ ಯುವ ಸ್ನೇಹಿತರಿಗೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ.
ಇನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ಭಾರತದ ವ್ಯಾಕ್ಸಿನೇಷನ್ ಸೋಮವಾರ 190.48 ಕೋಟಿ (1,90,48,54,263) ದಾಟಿದ್ದು, ಇದುವರೆಗೆ 12-14 ವರ್ಷದೊಳಗಿನ 3,06,69,820 ಮಕ್ಕಳಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದ್ದು, 1,02,00,272 ಎರಡನೇ ಡೋಸ್ ಪಡೆದಿದ್ದಾರೆ.
15 ರಿಂದ 18 ವರ್ಷ ವಯಸ್ಸಿನವರಲ್ಲಿ 5.87ರಷ್ಟು ಲಸಿಕೆ ಹಾಕಲಾಗಿದ್ದು, ಅದರಲ್ಲಿ 70,428 ಮೊದಲ ಡೋಸ್ ಮತ್ತು 4,33,08,651 ಎರಡನೇ ಡೋಸ್ ಹಾಕಲಾಗಿದೆ ಎಂದು ತಿಳಿಸಿದೆ.