ಮೈಸೂರು, ಮೇ 10 (DaijiworldNews/DB): ಯುವಕನೊಬ್ಬನ ಬಳಿ ಮಹಿಳೆಯೋರ್ವಳು ಸ್ವಲ್ಪ ಹೊತ್ತು ನೋಡಿಕೊಳ್ಳಿ ಎಂದು 9 ತಿಂಗಳ ಮಗುವನ್ನು ನೀಡಿ ನಾಪತ್ತೆಯಾದ ಘಟನೆ ರಾಯಚೂರಿನಲ್ಲಿ ನಡೆದಿದೆ. ಬಳಿಕ ಕಂದಮ್ಮನ ಸಮೇತ ಮೈಸೂರಿಗೆ ಬಂದ ಯುವಕ ಅದನ್ನು ಪೊಲೀಸರ ವಶಕ್ಕೆ ನೀಡಿದ್ದಾನೆ.
ವೈಯಕ್ತಿಕ ಕೆಲಸದ ಮೇರೆಗೆ ಮೈಸೂರಿನ ಯುವಕ ರಘು ಎಂಬವರು ರಾಯಚೂರಿಗೆ ಹೋಗಿದ್ದರು. ಬಳಿಕ ಅಲ್ಲಿಂದ ಮೈಸೂರಿಗೆ ವಾಪಸ್ಸಾಗಲು ರಾಯಚೂರಿನ ಬಸ್ ನಿಲ್ದಾಣದಲ್ಲಿ ಬಸ್ಗಾಗಿ ಕಾಯುತ್ತಿದ್ದ ವೇಳೆ ಮಧ್ಯವಯಸ್ಕ ಮಹಿಳೆಯೊಬ್ಬಳು ಆತನ ಬಳಿ ಬಂದು ತನ್ನ ಬಳಿಯಿಂದ ಒಂಬತ್ತು ತಿಂಗಳ ಮಗುವನ್ನು ರಘು ಕೈಗಿತ್ತು ಸ್ವಲ್ಪ ಹೊತ್ತು ನೋಡಿಕೊಳ್ಳಿ, ಈಗ ವಾಪಾಸ್ ಬರುತ್ತೇನೆ ಎಂದಿದ್ದಾಳೆ. ಮಹಿಳೆ ಮಾತನ್ನು ನಂಬಿದ ರಘು ಮಗುವನ್ನು ಆಕೆಯ ಕೈಯಿಂದ ಪಡೆದುಕೊಂಡಿದ್ದಾನೆ.
ಆದರೆ ಈಗ ವಾಪಾಸ್ ಬರುತ್ತೇನೆ ಎಂದ ಮಹಿಳೆ ಮೂರು ಗಂಟೆ ಕಳೆದರೂ ಬಾರದ ಕಾರಣ ಆತಂಕಗೊಂಡ ಯುವಕ ಮಗುವನ್ನು ಹಿಡಿದುಕೊಂಡು ಬಸ್ ಹತ್ತಿ ಮೈಸೂರಿಗೆ ಬಂದು ಮೈಸೂರಿನ ಲಷ್ಕರ್ ಠಾಣೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾನೆ. ಬಳಿಕ ಮಗುವನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾನೆ. ಪೊಲೀಸರು ತಾಯಿಯಿಂದ ಬೇರ್ಪಟ್ಟ ಮಗುವನ್ನು ಆರೈಕೆ ಮಾಡಿ, ಬಾಲಮಂದಿರಕ್ಕೆ ನೀಡಿದ ಬಳಿಕ ರಾಯಚೂರು ಬಸ್ ನಿಲ್ದಾಣ ವ್ಯಾಪ್ತಿಯ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಆದರೆ ಮಹಿಳೆ ಪತ್ತೆಯಾಗದ ಕಾರಣ ಮಗು ಬಾಲಮಂದಿರಲ್ಲೇ ಆರೈಕೆಯಲ್ಲಿದೆ.