ಧರ್ಮಶಾಲಾ, ಮೇ 10 (DaijiworldNews/DB): ಮೇ 12 ರಿಂದ 15ರವರೆಗೆ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆಯಲಿರುವ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಅಧಿವೇಶನದಲ್ಲಿ ಟೀಂ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಪಾಲ್ಗೊಳ್ಳಲಿದ್ದಾರೆ.
ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಧರ್ಮಶಾಲಾ ಬಿಜೆಪಿ ಶಾಸಕ ವಿಶಾಲ್ ನೆಹ್ರಿಯಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಮುಖ್ಯಮಂತ್ರಿ ಜೈರಾಮ್ ಠಾಕೂರ್, ಕೇಂದ್ರ ಸಚಿವರು ಮತ್ತು ಇತರ ಪದಾಧಿಕಾರಿಗಳು ಈ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ. ದೇಶಾದ್ಯಂತ 139 ಮಂದಿ ಪ್ರತಿನಿಧಿಗಳು ಆಗಮಿಸಲಿದ್ದಾರೆ ಎಂದರು.
ರಾಹುಲ್ ದ್ರಾವಿಡ್ ಅವರು ಯುವಕರಿಗೆ ಸ್ಪೂರ್ತಿ. ಅವರ ಉಪಸ್ಥಿತಿ ಮೂಲಕ ರಾಜಕೀಯ ಮಾತ್ರವಲ್ಲದೆ ಇತರ ಕ್ಷೇತ್ರಗಳಲ್ಲಿಯೂ ಯುವಕರ ಪಾಲ್ಗೊಳ್ಳುವಿಕೆ ಬಗ್ಗೆ ಯೋಜಿಸಬಹುದು ಎಂದವರು ತಿಳಿಸಿದರು.
ಶೀಘ್ರದಲ್ಲಿಯೇ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ಚುನಾವಣೆ ಸನಿಹದಲ್ಲಿರುವಾಗಲೇ ಬಿಜೆಪಿ ಕಾರ್ಯಕ್ರಮದಲ್ಲಿ ರಾಹುಲ್ ದ್ರಾವಿಡ್ ಭಾಗವಹಿಸುತ್ತಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.