ಮಂಡ್ಯ, ಮೇ 10 (DaijiworldNews/DB): ಜೆಡಿಎಸ್ ವರಿಷ್ಠರಾದ ಎಚ್ಡಿಡಿ ಮತ್ತು ಎಚ್ಡಿಕೆ ಅವರ ಧೋರಣೆಯಿಂದಾಗಿ ಕಳೆದ ನಾಲ್ಕು ವರ್ಷಗಳಿಂದ ನಿರಂತರ ಹಿಂಸೆ ಅನುಭವಿಸಿದ್ದೇನೆ ಎಂದು ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಜೆಡಿಎಸ್ ನಾಯಕತ್ವದ ಬಗ್ಗೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಇಲ್ಲಿ ಮಾತನಾಡಿದ ಅವರು, ಜೆಡಿಎಸ್ನಲ್ಲಿ ನನ್ನ ಮಾತಿಗೆ ಬೆಲೆಯೇ ನೀಡುತ್ತಿಲ್ಲ. ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ವರ್ತನೆ ಬೇಸರ ತರಿಸಿದೆ. ಸಲಹೆಗಳಿಗೆ ಕಿವಿಗೊಡುವುದಿಲ್ಲ. ಅವರ ಈ ರೀತಿಯ ಧೋರಣೆಗಳಿಂದ ನಾಲ್ಕು ವರ್ಷಗಳಿಂದ ನಿರಂತರವಾಗಿ ಹಿಂಸೆ, ಕಿರುಕುಳ ಅನುಭವಿಸಿದ್ದೇನೆ ಎಂದರು.
ಪರಿಷತ್ ಸದಸ್ಯತ್ವ ಮುಗಿಯುವವರೆಗೆ ಜೆಡಿಎಸ್ನಲ್ಲಿರುತ್ತೇನೆ. ಬಳಿ ನನ್ನ ಹಿತೈಷಿಗಳು ಮತ್ತು ಸ್ನೇಹಿತರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಪಕ್ಷ ಬಿಡುವ ಯೋಚನೆಯನ್ನು ಬಹಿರಂಗಗೊಳಿಸಿದರು. ಆ ಮೂಲಕ ಜೆಡಿಎಸ್ನ ಮತ್ತೊಂದು ವಿಕೆಟ್ ಪತನವಾಗುವುದು ಸ್ಪಷ್ಟವಾಗಿದೆ. ಕೆಲವು ಮೂಲಗಳ ಪ್ರಕಾರ ಮರಿತಿಬ್ಬೇ ಗೌಡ ಅವರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ.
ಈ ನಡುವೆ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕದಂತೆ ಬೆಂಬಲಿಗರ ಸಭೆಯಲ್ಲಿ ಸೋಮವಾರ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಈಗಾಗಲೇ ಮಾಜಿ ಸಚಿವ ಎಸ್.ಡಿ. ಜಯರಾಂ ಪುತ್ರ ಅಶೋಕ್ ಜಯರಾಂ, ಮಾಜಿ ಐಆರ್ಎಸ್ ಅಧಿಕಾರಿ ಲಕ್ಷ್ಮಿ ಅಶ್ವಿನ್ಗೌಡ ಜೆಡಿಎಸ್ಗೆ ಗುಡ್ ಬೈ ಹೇಳಿದ್ದಾರೆ.