ಕಲಬುರಗಿ, ಮೇ 10 (DaijiworldNews/DB): ಬಿಎಸ್ವೈ ಮುಖ್ಯಮಂತ್ರಿಯಾಗಿದ್ದ ವೇಳೆ ಮುಕ್ಕಾಲು ಗಂಟೆ ಅವರನ್ನು ನಾನು ತರಾಟೆಗೆ ತೆಗೆದುಕೊಂಡಿದ್ದೇನೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.
ತಮ್ಮದೇ ಪಕ್ಷದ ನಾಯಕರ ವಿರುದ್ದ ಮಾಧ್ಯ,ಮಗಳ ಮುಂದೆ ರೇಗಾಡುವ ಮತ್ತು ಅಂತಹವುಗಳನ್ನು ಪಕ್ಷದ ವೇದಿಕೆ ಅಥವಾ ಹೈಕಮಾಂಡ್ ಮುಂದೆ ಚರ್ಚಿಸದಿರುವ ಕುರಿತು ಕಲಬುರಗಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪಕ್ಷದ ವೇದಿಕೆ ಅಥವಾ ಹೈಕಮಾಂಡ್ ಮುಂದೆ ಮಾತನಾಡುವ ಅವಕಾಶ ನನಗೆ ಸಿಗುವುದಿಲ್ಲ. ವೇದಿಕೆ ಮೇಲಿದ್ದವರು ಮಾತನಾಡಿ ಹೋಗುತ್ತಾರೆ. ಹೀಗಾಗಿ ಇರುವ ಸಮಸ್ಯೆಗಳನ್ನು ಅವರಿಗೆ ತಲುಪಿಸಬೇಕಾದರೆ ಮಾಧ್ಯಮಗಳ ಮುಂದೆ ಮಾತನಾಡುವುದು ಅವಶ್ಯ ಎಂದರು.
ಯಡಿಯೂರಪ್ಪ ಸಿಎಂ ಆಗಿದ್ದಾಗ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಕ್ಕಾಲು ಗಂಟೆ ಅವರನ್ನು ತರಾಟೆಗೆ ತೆಗೆದುಕೊಂಡಿದ್ದೆ. ಆ ವೇಳೆ ಅವರು ನನ್ನನ್ನು ಸುಮ್ಮನಾಗಿಸುವ ಪ್ರಯತ್ನ ಮಾಡಿದರಾದರೂ ನಾನು ಕೇಳಲಿಲ್ಲ. ನಾನು ಶಾಸಕ, ನೀವು ಮುಖ್ಯಮಂತ್ರಿ. ಹೀಗಾಗಿ ನನ್ನ ಪ್ರಶ್ನೆಗಳಿಗೆ ನಿಮ್ಮ ಉತ್ತರ ಬೇಕೇ ಬೇಕು ಎಂದು ಪಟ್ಟು ಹಿಡಿದು ಮಾತನಾಡಿದ್ದೆ. ಕಳೆದ ಬೆಳಗಾವಿ ಅಧಿವೇಶನದ ವೇಳೆ ಸಿಎಂ ಬೊಮ್ಮಾಯಿ ಅವರನ್ನೂ ತರಾಟೆಗೆ ತೆಗೆದುಕೊಂಡಿದ್ದೆ. ಮಾತನಾಡಿದ್ದರಿಂದಲೇ ಸುಧಾರಣೆಗಳು ನಡೆದಿವೆ ಎಂದು ಅವರು ತಿಳಿಸಿದರು.
ಯಾರ ಮುಲಾಜಿನಲ್ಲಿಯೂ ನಾನಿಲ್ಲ. ಪ್ರವಾಹ ಪೀಡಿತರಿಗೆ ಸರಿಯಾದ ಪರಿಹಾರಧನ ವಿತರಣೆಯಾಗದ ಕುರಿತು ಮಾತನಾಡಿದ್ದಕ್ಕೆ ಹೈಕಮಾಂಡ್ ಶೋಕಾಸ್ ನೊಟೀಸ್ ನೀಡಿತ್ತು. ಆಗ 11 ಪುಟಗಳ ಉತ್ತರ ಬರೆದು ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಕಳುಹಿಸಿದ್ದೆ. ಆದರೆ ಇನ್ನು ಮುಂದೆ ನನಗೆ ಪ್ರಮೋಶನ್ ಬರುತ್ತದೆಯೇ ಹೊರತು ಶೋಕಾಸ್ ನೊಟೀಸಲ್ಲ ಎಂದವರು ಇದೇ ವೇಳೆ ತಿಳಿಸಿದರು.