ನವದೆಹಲಿ, ಮೇ 10 (DaijiworldNews/DB): ರೈಲಿನಲ್ಲಿ ರಾತ್ರಿ ಪ್ರಯಾಣದ ವೇಳೆ ಮೊಬೈಲ್ನಲ್ಲಿ ಏರುಧ್ವನಿಯಲ್ಲಿ ಮಾತನಾಡುವುದು, ಲೌಡ್ಸ್ಪೀಕರ್ನಲ್ಲಿ ಸಂಗೀತ ಕೇಳುವುದನ್ನು ನಿಷೇಧಿಸಿ ಭಾರತೀಯ ರೈಲ್ವೆ ಇಲಾಖೆ ಮಾರ್ಗಸೂಚಿ ಹೊರಡಿಸಿದೆ.
ರೈಲು ಪ್ರಯಾಣಿಕರಿಗೆ ಆರಾಮದಾಯಕ ಮತ್ತು ಸುಖಕರ ಪ್ರಯಾಣದ ಅನುಭವ ನೀಡುವ ಉದ್ದೇಶದಿಂದ ಭಾರತೀಯ ರೈಲ್ವೆ ಇಲಾಖೆಯು ಪ್ರಯಾಣಿಕ ಸ್ನೇಹಿ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಏರುಧ್ವನಿಯಲ್ಲಿ ಮಾತನಾಡುವುದು, ಸಂಗೀತವನ್ನು ದೊಡ್ಡದಾದ ವಾಲ್ಯೂಮ್ನಲ್ಲಿ ಆಲಿಸುವುದರಿಂದ ಇತರ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ಹೀಗಾಗಿ ರಾತ್ರಿ ಹೊತ್ತು ಇವುಗಳನ್ನು ಮಾಡಬಾರದು ಎಂದು ಸೂಚಿಸಿದೆ. ಅಲ್ಲದೆ, ಯಾರಾದರೂ ನಿಷೇಧಿತ ಕ್ರಮವನ್ನು ಮುಂದುವರಿಸಿದೆ ಅಂತಹವರು ಇದನ್ನು ರೈಲ್ವೇ ಸಿಬಂದಿ ಗಮನಕ್ಕೆ ತರಬಹುದು. ಸಮಸ್ಯೆ ನಿವಾರಣೆಯ ಜವಾಬ್ದಾರಿ ರೈಲು ಸಿಬಂದಿಯದ್ದಾಗಿರುತ್ತದೆ. ತಪಾಸಣೆ ಸಿಬಂದಿ, ಆರ್ಪಿಎಫ್, ಎಲೆಕ್ಟ್ರಿಷಿಯನ್, ಅಡುಗೆ ಮತ್ತು ನಿರ್ವಹಣೆ ಸಿಬಂದಿ ಪರಿಹರಿಸುವ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಇಲಾಖೆ ತಿಳಿಸಿದೆ.
ರಾತ್ರಿ 10 ಗಂಟೆಯ ನಂತರದ ಪ್ರಯಾಣಕ್ಕೆ ಈ ಮಾರ್ಗಸೂಚಿಗಳು ಅನ್ವಯವಾಗುತ್ತವೆ. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ಅಂಗವಿಕಲರು ಮತ್ತು ಒಂಟಿ ಮಹಿಳಾ ಪ್ರಯಾಣಿಕರಿಗೆ ರೈಲ್ವೆ ಸಿಬಂದಿ ಅಗತ್ಯ ನೆರವು ಕಲ್ಪಿಸಬೇಕು. ಅಲ್ಲದೆ ವಲಯ ಮಟ್ಟದಲ್ಲಿ ನೂತನ ಮಾರ್ಗಸೂಚಿಗಳ ಕುರಿತು ಪ್ರಯಾಣಿಕರಿಗೆ ಜಾಗೃತಿ ಮೂಡಿಸಬೇಕು. ಟಿಕೆಟ್ ಪರಿಶೀಲಕರು ಮತ್ತು ಇತರ ಸಿಬಂದಿ ಈ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ಒದಗಿಸಬೇಕು ಎಂದು ತಿಳಿಸಲಾಗಿದೆ.