ಮುಂಬೈ, ಮೇ 09 (DaijiworldNews/HR): ಉದ್ಧವ್ ಠಾಕ್ರೆ ಮನೆ ಮುಂಭಾಗದಲ್ಲಿ ಹನುಮಾನ್ ಚಾಲೀಸಾ ಪಠಿಸುವುದಾಗಿ ಸವಾಲು ಹಾಕಿದ್ದ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ಮಹಾರಾಷ್ಟ್ರದ ಸಂಸದೆ ನವ್ನೀತ್ ರಾಣಾ ಹಾಗೂ ಪತಿ, ಪಕ್ಷೇತರ ಶಾಸಕ ರವಿ ರಾಣಾ ಅವರಿಗೆ ವಿಶೇಷ ನ್ಯಾಯಾಲಯ ಸೋಮವಾರ ನೋಟಿಸ್ ಜಾರಿ ಮಾಡಿ, ಮೇ 18 ರಂದು ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ.
ದಂಪತಿಗಳಿಗೆ ಕಳೆದ ವಾರ ಜಾಮೀನು ನೀಡುವಾಗ ವಿಶೇಷ ನ್ಯಾಯಾಲಯ ವಿಧಿಸಿದ್ದ ಷರತ್ತುಗಳಲ್ಲಿ ಒಂದನ್ನು ಉಲ್ಲಂಘಿಸಿದ್ದಾರೆ ಎಂಬ ಕಾರಣಕ್ಕೆ ದಂಪತಿಯ ಜಾಮೀನು ರದ್ದುಗೊಳಿಸಬೇಕೆಂದು ಪೊಲೀಸರು ಕೋರಿದ್ದು, ವಿಶೇಷ ನ್ಯಾಯಾಧೀಶ ಆರ್ ಎನ್ ರೋಕಡೆ ಸೋಮವಾರ ನೋಟಿಸ್ ಜಾರಿ ಮಾಡಿ ಮೇ 18 ರಂದು ರಾಣಾ ದಂಪತಿಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಇನ್ನು ದೇಶದ್ರೋಹ ಮತ್ತು ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಪ್ರಚೋದಿಸುವ ಆರೋಪದ ಮೇಲೆ ರಾಣಾ ದಂಪತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ವಿಶೇಷ ನ್ಯಾಯಾಲಯವು ಮೇ 4 ರಂದು ದಂಪತಿಗೆ ಜಾಮೀನು ಮಂಜೂರು ಮಾಡಿ ಇದೇ ರೀತಿಯ ಅಪರಾಧದಲ್ಲಿ ತೊಡಗಬಾರದು ಮತ್ತು ಮಾಧ್ಯಮಗಳೊಂದಿಗೆ ಮಾತನಾಡಬಾರದುಎಂದು ಕೆಲವು ಷರತ್ತುಗಳನ್ನು ವಿಧಿಸಿತ್ತು.