ಹುಬ್ಬಳ್ಳಿ, ಮೇ 08 (DaijiworldNews/DB): ಧ್ವನಿವರ್ಧಕಗಳ ಶಬ್ದಮಿತಿ ಬಗ್ಗೆ ರಾಜ್ಯ ಸರ್ಕಾರವೇ ಪರಿಶೀಲನೆ ನಡೆಸಿ ಕ್ರಮ ವಹಿಸುತ್ತದೆ. ಕಾನೂನು ಕೈಗೆತ್ತಿಕೊಳ್ಳುವ ಕೆಲಸವನ್ನು ಯಾರೂ ಮಾಡಬಾರದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಮಸೀದಿಗಳಲ್ಲಿ ಧ್ವನಿವರ್ಧಕ ತೆರವಿಗೆ ಶ್ರೀರಾಮ ಸೇನೆ ನೀಡಿದ ಗಡುವು ಕುರಿತು ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ಸರ್ಕಾರದ ಕೆಲಸವನ್ನು ಸರ್ಕಾರ ಮಾಡುತ್ತದೆ. ಬೇರೆ ಯಾರೂ ಸರ್ಕಾರದ ಕೆಲಸವನ್ನು ಮಾಡುವ ಅಗತ್ಯ ಇಲ್ಲ. ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡುವುದು ಸಲ್ಲ ಎಂದರು.
ಸರ್ಕಾರವೇ ಪತನಗೊಳ್ಳುವಂತಹ ಕಿಂಗ್ಪಿನ್ಗಳು ಪಿಎಸ್ಐ ನೇಮಕಾತಿ ಹಗರಣದಲ್ಲಿ ಇದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಅಂತಹವರು ವಿಚಾರ ಗೊತ್ತಿದ್ದರೆ ಸೂಕ್ತ ದಾಖಲೆ ಒದಗಿಸಲಿ. ಅದು ಬಿಟ್ಟು ಅನಗತ್ಯ ರಾಜಕೀಯ ಮಾಡುವುದು ಬೇಕಿಲ್ಲ. ಪ್ರಿಯಾಂಕ್ ಖರ್ಗೆ ಜೊತೆಗಿದ್ದ ಕಾಂಗ್ರೆಸ್ನ ಬ್ಲಾಕ್ ಅಧ್ಯಕ್ಷ ಈಗಾಗಲೇ ಸಿಕ್ಕಿ ಬಿದ್ದಿದ್ದಾನೆ. ಇನ್ನೂ ಯಾರೆಲ್ಲ ಭಾಗಿಯಾಗಿದ್ದಾರೋ ಅವರನ್ನು ಸಿಐಡಿ ವಿಚಾರಿಸಿ ಬಂಧಿಸಲಿದೆ. ಸುಖಾಸುಮ್ಮನೆ ಬಿಜೆಪಿ ಮತ್ತು ಆರೆಸ್ಸೆಸ್ ಮೇಲೆ ಆರೋಪ ಸಲ್ಲ ಎಂದು ಅವರು ಎಚ್ಚರಿಕೆ ನೀಡಿದರು.