ಮುಂಬೈ, ಮೇ 08 (DaijiworldNews/DB): ನನ್ನ ಎದುರು ಚುನಾವಣೆಗೆ ಸ್ಪರ್ಧಿಸಿ ಎಂದು ಪಕ್ಷೇತರ ಸಂಸದೆ ನವನೀತ್ ರಾಣಾ ಕೌರ್ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಸವಾಲು ಹಾಕಿದ್ದಾರೆ.
ಹನುಮಾನ್ ಚಾಲಿಸಾ ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ಪೊಲೀಸರಿಂದ ಬಂಧಿಸಲ್ಪಟ್ಟು ಜಾಮೀನಿನ ಮೇಲೆ ಬಿಡುಗಡೆಗೊಂಡಿರುವ ಅವರು ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿ, ಉದ್ದವ್ ಠಾಕ್ರೆ ನೇರವಾಗಿ ಶಾಸನಸಭೆಗೆ ಆಯ್ಕೆಯಾಗಲು ಯಾವುದಾದರೂ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲಿ. ಅದೇ ಕ್ಷೇತ್ರದಿಂದ ನಾನು ಸ್ಪರ್ಧೆ ಮಾಡುತ್ತೇನೆ. ನನ್ನ ವಿರುದ್ದ ಸ್ಪರ್ಧಿಸುವ ಬಗ್ಗೆ ಅವರು ತಿಳಿಸಲಿ ಎಂದರು.
ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸುತ್ತೇನೆ. ಜನರ ಶಕ್ತಿ ಏನೆಂಬುದು ಅವರಿಗೆ ಆಗ ಅರಿವಾಗಬಹುದು ಎಂದವರು ಇದೇ ವೇಳೆ ತಿರುಗೇಟು ನೀಡಿದರು.
ಯಾವುದೇ ಅಪರಾಧ ಎಸಗದಿದ್ದರೂ ನನ್ನನ್ನು 14 ದಿನಗಳ ಕಾಲ ಜೈಲಿಗೆ ಕಳುಹಿಸಲಾಗಿದೆ. ನೀವು 14 ದಿನವಲ್ಲ, 14 ವರ್ಷಗಳ ಕಾಲ ಜೈಲಿಗೆ ಕಳುಹಿಸಿದರೂ ಶ್ರೀರಾಮ ಮತ್ತು ಹನುಮಾನ್ ಹೆಸರು ಪಠಣೆಯನ್ನು ನಾನು ನಿಲ್ಲಿಸುವುದಿಲ್ಲ ಎಂದವರು ಇದೇ ವೇಳೆ ತಿಳಿಸಿದರು.