ಬೆಳಗಾವಿ, ಮೇ 08 (DaijiworldNews/DB): ಬಸವರಾಜ ಬೊಮ್ಮಾಯಿಯವರು ಹಣ ನೀಡಿ ಮುಖ್ಯಮಂತ್ರಿ ಹುದ್ದೆ ಪಡೆದುಕೊಂಡವರು. ಜನರಿಂದ ಆಯ್ಕೆಯಾದ ಮುಖ್ಯಮಂತ್ರಿ ಅಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣಗೊಳಿಸಿ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದ ಅವರು, ಹಣ ನೀಡಿ ಮುಖ್ಯಮಂತ್ರಿಯಾಗಿರುವುದರಿಂದ ಜನಪಯೋಗಿ ಕೆಲಸ ಮಾಡಲು ಅವರಿಂದ ಸಾಧ್ಯವಾಗುತ್ತಿಲ್ಲ. ಅವರನ್ನು ಆಯ್ಕೆ ಮಾಡಿರುವುದು ಆರೆಸ್ಸೆಸ್ ಹೊರತು ಜನರಲ್ಲ. ಹೀಗಾಗಿ ಅವರು ಹೇಳಿದಂತೆ ಇವರು ಕೇಳುತ್ತಿದ್ದಾರೆ ಎಂದು ಟೀಕಿಸಿದರು.
2023ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರ ಬರುವುದಕ್ಕೆ ನೀವೆಲ್ಲರು ಶ್ರಮಿಸಬೇಕು. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದರೆ ಜನರಿಗೆ 10 ಕೆಜಿ ಅಕ್ಕಿ ಕೊಡುತ್ತೇವೆ. ಹೊಸ ಮನೆಗಳನ್ನು ಕಲ್ಪಿಸಿಕೊಡುತ್ತೇವೆ. ಪ್ರವಾಹಕ್ಕೆ ಯಾರೂ ಆಸ್ತಿಪಾಸ್ತಿ ಕಳೆದುಕೊಳ್ಳದಂತೆ ಜಾಗೃತೆ ವಹಿಸುತ್ತೇವೆ. ಇದೆಲ್ಲವೂ ಆಗಬೇಕೆಂದರೆ ನೀವು ಕಾಂಗ್ರೆಸ್ಗೆ ಅಧಿಕಾರ ನೀಡಬೇಕು ಎಂದವರು ಮನವಿ ಮಾಡಿದರು.
ನಾನು ಅಧಿಕಾರ ಪಡೆಯುವುದು ಮುಖ್ಯವಲ್ಲ, ಆದರೆ ರಾಜ್ಯವನ್ನು ಬಿಜೆಪಿಯಿಂದ ರಕ್ಷಿಸುವುದು ಮುಖ್ಯ. ನನ್ನ ಅಧಿಕಾರಾವಧಿಯಲ್ಲಿ 4 ಕೋಟಿ 30 ಲಕ್ಷ ಜನರಿಗೆ ಅನ್ನಭಾಗ್ಯ ಕಲ್ಪಿಸಿದ್ದೇನೆ. ಕೋವಿಡ್ ಸಮಯದಲ್ಲಿ ಅನ್ನಭಾಗ್ಯದಿಂದ ಸಾಕಷ್ಟು ಉಪಯೋಗವಾಗಿದೆ ಎಂದರು.